ಹಾವೇರಿ: ವಿವಿಧ ಇಲಾಖೆಗಳಲ್ಲಿ ಇರುವ ಸಮಸ್ಯೆಗಳ ಇತ್ಯರ್ಥಕ್ಕೆ, ಪ್ರತಿ ತಿಂಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯ ಸಭೆ ಮಾಡುವ ಮೂಲಕ, ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ಕುಡಿಯುವ ನೀರು, ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು.
ಪೌರಕಾರ್ಮಿಕರಿಗೆ ಹೆಪಟೈಟಿಸ್ ಇಂಜೆಕ್ಷನ್:ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಹೆಪಟೈಟಿಸ್- ಬಿ ಮತ್ತು ಸಿ ಇಂಜೆಕ್ಷನ್ ಮಾಡಿಸಬೇಕು ಎಂದು ಸೂಚನೆ ನೀಡಿದರು. ಪೌರಕಾರ್ಮಿಕರ ಹೆಪಟೈಟಿಸ್ ಪರೀಕ್ಷೆ ಹಾಗೂ ಹಿಮೋಗ್ಲೋಬಿನ್ ಪರೀಕ್ಷೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಂಗನವಾಡಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ, ಶಾಲಾ ಕಟ್ಟಡಗಳು, ಶಿಕ್ಷಣ ಇಲಾಖೆ ಉಪನಿರ್ದೇಶಕರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳ ಕಟ್ಟಡಗಳು ಆಯಾ ಇಲಾಖೆ ಮುಖ್ಯಸ್ಥರ ಹೆಸರಿನಲ್ಲಿ ನೋಂದಣಿಯಾಗಿರಬೇಕು. ಈ ಕುರಿತು ಪರಿಶೀಲನೆ ಮಾಡಿ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದರು. ಕರ ವಸೂಲಾತಿಗೆ ಆದ್ಯತೆ ನೀಡಿ: ಸ್ಥಳೀಯ ನಗರ ಸಂಸ್ಥೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಕರ ವಸೂಲಾಗಿದೆ ಎಂದು ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು ಪಶ್ನಿಸಿದಾಗ, ಸರಿಯಾದ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕರ ವಸೂಲಾತಿಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಜಿಪಂ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಿವಿಧ ತಾಲೂಕುಗಳ ತಹಸೀಲ್ದಾರಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.