ಗಣಿನಗರಿಯಲ್ಲಿ ಹೋಳಿಹಬ್ಬದ ಸಡಗರ

KannadaprabhaNewsNetwork | Published : Mar 15, 2025 1:05 AM

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಶುಕ್ರವಾರ ಹೋಳಿ ಹಬ್ಬದ ಆಚರಣೆಯ ಸಂಭ್ರಮ ಕಂಡು ಬಂತು. ಯುವಕ, ಯುವತಿಯರು, ಮಕ್ಕಳು, ವೃದ್ಧರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹಬ್ಬದ ಸಡಗರದಲ್ಲಿ ತೊಡಗಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಶುಕ್ರವಾರ ಹೋಳಿ ಹಬ್ಬದ ಆಚರಣೆಯ ಸಂಭ್ರಮ ಕಂಡು ಬಂತು. ಯುವಕ, ಯುವತಿಯರು, ಮಕ್ಕಳು, ವೃದ್ಧರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹಬ್ಬದ ಸಡಗರದಲ್ಲಿ ತೊಡಗಿಸಿಕೊಂಡಿದ್ದರು.

ನಗರದ ರಾಘವೇಂದ್ರಸ್ವಾಮಿ ವೃತ್ತದಲ್ಲಿ (ಕೂಲ್ ಕಾರ್ನರ್ ಸರ್ಕಲ್‌) ನೂರಾರು ಜನರು ಸೇರಿ ಹೋಳಿಹಬ್ಬವನ್ನು ಸಡಗರದಿಂದ ಆಚರಿಸಿದರು. ಇಲ್ಲಿನ ಜೈನ್ ಮಾರುಕಟ್ಟೆಯ ಬಳಿ ಜೈನ್ ಸಮುದಾಯದ ಮಹಿಳೆಯರು ಪರಸ್ಪರ ಬಣ್ಣ ಎರಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಯುವಕರು ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಹೋಳಿ ಆಚರಣೆಯಲ್ಲಿ ತೊಡಗಿದ್ದರು. ಕೆಲವರು ದ್ವಿಚಕ್ರ ವಾಹನದಲ್ಲಿ ನಗರದಲ್ಲಿ ಸಂಚರಿಸಿ ಬಣ್ಣದಾಟದಲ್ಲಿ ಭಾಗಿಯಾಗಿದ್ದರು. ನಗರದ ಕೆಲವು ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಯೇ ಹೋಳಿಹಬ್ಬ ಆಚರಣೆಯನ್ನು ಆಯೋಜಿಸಿದ್ದವು. ಪುಟ್ಟ ಪುಟ್ಟ ಮಕ್ಕಳು ಬಣ್ಣವನ್ನು ಎರಚಿ ಸಂಭ್ರಮವಿಸುವ ಕ್ಷಣಗಳನ್ನು ಪೋಷಕರು, ಶಿಕ್ಷಕರು ವೀಡಿಯೋ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು. ಬೆಳಗ್ಗೆ ಶುರುಗೊಂಡ ಬಣ್ಣದಾಟ ಮಧ್ಯಾಹ್ನದವರೆಗೆ ಮುಂದುವರಿದಿತ್ತು. ಕಾಲೇಜುಗಳ ಮುಂಭಾಗ ವಿದ್ಯಾರ್ಥಿಗಳು ಪರಸ್ಪರ ಬಣ್ಣಗಳನ್ನು ಬಳಿದು ಸಂಭ್ರಮಿಸಿದರು. ಪರೀಕ್ಷೆ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು ಬಣ್ಣದ ಹಬ್ಬದಿಂದ ದೂರ ಉಳಿದಿದ್ದರು.

ಹೋಳಿ ಹಬ್ಬದ ಸಡಗರಿಂದ ನಗರದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ನಗರದ ವಿವಿಧೆಡೆ ಕಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಬಳಿಕ ದಹನ ಮಾಡುವ ಕಾರ್ಯಕ್ರಮ ನಡೆದವು. ಗ್ರಾಮೀಣ ಪ್ರದೇಶಗಳಲ್ಲೂ ಹೋಳಿ ಹಬ್ಬದ ಸಡಗರ ಕಂಡು ಬಂದಿದ್ದು ಪುಟ್ಟ ಮಕ್ಕಳು, ಯುವಕರು ಹಾಗೂ ಮಹಿಳೆಯರು ಬಣ್ಣಗಳಲ್ಲಿ ಮಿಂದೆದ್ದರು.

ಹಬ್ಬದ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಬಣ್ಣಗಳನ್ನು ಖರೀದಿಸಿಕೊಂಡಿದ್ದ ಯುವಕರು ಬಣ್ಣದಾಟಕ್ಕೆ ಬೆಳಗ್ಗೆಯೇ ರಸ್ತೆಗಿಳಿದಿದ್ದರು.

ಹಿಂದೂಗಳು ಹೆಚ್ಚು ಸಡಗರಿಂದ ಆಚರಿಸುವ ಪ್ರಮುಖ ಹಬ್ಬಗಳ ಪೈಕಿ ಹೋಳಿ ಹಬ್ಬವೂ ಒಂದು.

ವಸಂತ ಋತುವನ್ನು ಸ್ವಾಗತಿಸಲು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಪೌರಾಣಿಕ ಹಿನ್ನೆಲೆ ಪ್ರಕಾರ ತಾರಕಾಸುರ ರಾಕ್ಷಸನನ್ನು ಸಂಹಾರ ಮಾಡುವ ಸಂಕೇತವಾಗಿ ಹಬ್ಬದ ಆಚರಣೆ ಚಾಲ್ತಿಗೆ ಬಂದಿದೆ.

ಜಾತಿ, ಮತ, ಧರ್ಮ ಮೀರಿ ಎಲ್ಲರೂ ಹೋಳಿಯಲ್ಲಿ ಒಟ್ಟಾಗಿ ಬಣ್ಣದಲ್ಲಿ ಮಿಂದೇಳುವುದು ಈ ಹಬ್ಬದ ವಿಶೇಷ. ವರ್ಷದಿಂದ ವರ್ಷಕ್ಕೆ ಈ ಹಬ್ಬ ಹೆಚ್ಚು ಮೆರಗು ಪಡೆದುಕೊಳ್ಳುತ್ತಿದೆ.

Share this article