ಯೋಗ ಆರೋಗ್ಯ ವೃದ್ಧಿ ಜೊತೆಗೆ ವ್ಯಕ್ತಿಯ ಸಮಗ್ರ ವಿಕಸನಕ್ಕೆ ಅತ್ಯುತ್ತಮ ಸಾಧನವಾಗಿದೆ ಎಂದು ಇಲಕಲ್ಲ ಯೋಗ ಗುರು ಗಿರೀಶ ಲದ್ವಾ ಹೇಳಿದರು.
ರೋಣ: ಯೋಗ ಆರೋಗ್ಯ ವೃದ್ಧಿ ಜೊತೆಗೆ ವ್ಯಕ್ತಿಯ ಸಮಗ್ರ ವಿಕಸನಕ್ಕೆ ಅತ್ಯುತ್ತಮ ಸಾಧನವಾಗಿದೆ ಎಂದು ಇಲಕಲ್ಲ ಯೋಗ ಗುರು ಗಿರೀಶ ಲದ್ವಾ ಹೇಳಿದರು.
ಅವರು ಶನಿವಾರ ಪಟ್ಟಣದ ನ್ಯೂ ಲಿಟಲ್ ಪ್ಲಾವರ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜರುಗಿದ ಯೋಗದಿಂದ ರೋಗ ದೂರ ಮಾಡಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಒತ್ತಡಮಯ ಜೀವನದಲ್ಲಿ ಮನಸ್ಸಿಗೆ ನೆಮ್ಮದಿ, ಶಾಂತಿ ಮತ್ತು ದೈಹಿಕ ಆರೋಗ್ಯ ವೖದ್ಧಿ ಮತ್ತು ವ್ಯಕ್ತಿ ಸದಾ ಲವಲವಿಕೆಯಿಂದ ಇರುವಲ್ಲಿ ಯೋಗ ರಾಮಬಾಣವಾಗಿದೆ. ಆರೋಗ್ಯವು ಮಾನವನಿಗೆ ಅತೀ ಮುಖ್ಯವಾದದ್ದು, ಅಂದಾಗ ಮಾತ್ರ ಸುಖಮಯ ಜೀವನ ಸಾಗಿಸಬಹುದು. ಎಲ್ಲಿಯವರೆಗೂ ನಮ್ಮಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತದೆಯೋ, ಅಲ್ಲಿಯವರೆಗೂ ಆನಂದಮಯ ಜೀವನ ಸಾಗಿಸಲು ಸಾಧ್ಯವಿಲ್ಲ. ರಾಷ್ಟ್ರ ಸಂಪನ್ಮೂಲವಾಗಲು ವ್ಯಕ್ತಿಯೂ ಬಹು ದೊಡ್ಡ ಶಕ್ತಿಯಾಗಿದ್ದು, ಅದು ಅತೀ ಅಮೂಲ್ಯವಾಗಿದೆ. ವೈಯಕ್ತಿಕವಾಗಿ ನೋಡಿದಲ್ಲಿ ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಅತೀ ಮುಖ್ಯ. ಆದ್ದರಿಂದ ಆರೋಗ್ಯ ಹೊಂದಿದ್ದಲ್ಲಿ ಎಲ್ಲವನ್ನು ಸಾಧಿಸಬಹುದಾಗಿದೆ. ಆ ನಿಟ್ಟಿನಲ್ಲಿ ಯೋಗವು ಮನುಷ್ಯನಿಗೆ ಆರೋಗ್ಯ ಸಂಪತ್ತನ್ನು ಒದಗಿಸುವುದರ ಜತೆಗೆ ಎಲ್ಲಾ ಸಂಪತ್ತನ್ನು ಸುಲಭವಾಗಿ ಗಳಿಸುವಲ್ಲಿ ಸಹಕಾರಿಯಾಗಿದೆ. ಮನಸ್ಸಿನ ಚಂಚಲತೆಗೆ ನಿಗ್ರಹಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಯೋಗವು ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಯೋಗಾಭ್ಯಾಸ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ವೈದ್ಯ ಡಾ. ಎಸ್.ಬಿ. ಲಕ್ಕೋಳ ಮಾತನಾಡಿ, ದೇಹ ಮತ್ತು ಮನಸ್ಸು ವಿಶ್ರಾಂತಿ ಹೊಂದಲು ಯೋಗವು ತುಂಬಾ ಪ್ರಯೋಜಕಾರಿಯಾಗಿದೆ. ಆಯುಷ್ಯ ವೃದ್ಧಿ, ಆರೋಗ್ಯ ವೃದ್ಧಿಯಾಗುವುದು. ಆಯಾಸವಿಲ್ಲದಂತೆ ದೇಹವನ್ನು ಹತೋಟಿಗೆ ತರಬಹುದಾಗಿದೆ. ಯೋಗ ಬಲ್ಲವನಿಗೆ ರೋಗ ಅವನತ್ತ ಸುಳಿಯದು. ಆದ್ದರಿಂದ ಯೋಗಕ್ಕೆ ಹೆಚ್ಚಿನ ಪ್ರಾಧ್ಯನತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ, ಗುರುಬಸವ ಯೋಗ ಸಮಿತಿ ಅಧ್ಯಕ್ಷ ಶೇಖಣ್ಣ ನವಲಗುಂದ, ಉಪಾಧ್ಯಕ್ಷ ಉಮೇಶ ಬೆಳದಡಿ, ಕಾರ್ಯದರ್ಶಿ ಹುಚ್ಚೇಶ ಜವಳಿ, ಸೋಮಶೇಖರ ಲದ್ದಿಮಠ,ಶೇಖಣ್ಣ ಐಹೊಳ, ಮಾಹಾದೇವಗೌಡ ಲಿಂಗನಗೌಡ್ರ, ಎಸ್.ಪಿ. ಮಾನ್ಪಡೆ, ಪ್ರಭುಗೌಡ ಪಾಟೀಲ, ಯಲ್ಲಪ್ಪ ಸುಂಕದ, ಬಿ.ಎನ್. ಬಳಗಾನೂರ, ರಾಜು ಗುಡಿಕೋಟಿ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.