ಮನೆ ಹೆರಿಗೆ ಅಪಾಯಕಾರಿ, ಆಸ್ಪತ್ರೆ ಸುರಕ್ಷಿತ : ಡಾ. ನಾಯಕ

KannadaprabhaNewsNetwork | Published : Jul 30, 2024 12:36 AM

ಸಾರಾಂಶ

ಮನೆಯಲ್ಲಿ ಹೆರಿಗೆ ಮಾಡಿಸುವುದು ತಾಯಿ ಮತ್ತು ಮಗುವಿನ ಜೀವನಕ್ಕೆ ಅಪಾಯಕಾರಿ. ಆದ್ದರಿಂದ ಸಕಲ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿ ಹೆರಿಗೆ ಆಗಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಮನೆಯಲ್ಲಿ ಹೆರಿಗೆ ಮಾಡಿಸುವುದು ತಾಯಿ ಮತ್ತು ಮಗುವಿನ ಜೀವನಕ್ಕೆ ಅಪಾಯಕಾರಿ. ಆದ್ದರಿಂದ ಸಕಲ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿ ಹೆರಿಗೆ ಆಗಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಹೇಳಿದರು.

ನಗರದ ರಂಗಂಪೇಟೆಯ ಜಾಮೀಯಾ ಮಸೀದಿ ಶಾದಿಮಹಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲೂಕು ಆರೋಗ್ಯ ಕಚೇರಿ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಮತ್ತು ಉಚಿತ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಭಲಿಂಗ ಮಾನಕರ್, ದಿನದ 24 ಗಂಟೆಯೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕೆಲ್ ಕಾಲೇಜಿನ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೌಲಭ್ಯ ಇದೆ. ಯಾದಗಿರಿ ಜಿಲ್ಲೆಯಲ್ಲಿ ಶೇ.70 ರಷ್ಟು ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲಿ ಆಗುತ್ತವೆ. ಇದನ್ನು ಶೇ. 100ರಷ್ಟು ಆಗಲು ಶ್ರಮಿಸಬೇಕು ಎಂದರು.

ವಿಶ್ವ ಜನಸಂಖ್ಯೆ ನಿಯಂತ್ರಣ ಕುರಿತು ವೈದ್ಯಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ಉಪನ್ಯಾಸ ನೀಡಿದರು. ಡಾ. ಮಲ್ಲಪ್ಪ, ಡಾ. ನಾಜೀರ್, ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ, ಮುಖಂಡ ಅಬ್ದುಲ್ ಅಲಿಂ ಗೋಗಿ ಮಾತನಾಡಿದರು. ತಹಸೀಲ್ದಾರ್ ಕೆ. ವಿಜಯಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಲ್ಲಪ್ಪ ಸ್ವಾಗತಿಸಿದರು. ತುಕಾರಾಮ ನಿರೂಪಿಸಿದರು. ಶಾಂತಿಲಾಲ್ ವಂದಿಸಿದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ನಗರಸಭೆ ಸದಸ್ಯರಾದ ನಾಸೀರ್ ಹುಸೇನ್ ಕುಂಡಾಲೆ, ಸುವರ್ಣಾ ಎಲಿಗಾರ, ಜಮೀರ್ ಅಹ್ಮದ್, ಖಮರುದ್ದೀನ್ ನಾರಾಯಣಪೇಟೆ ಪ್ರಮುಖರಾದ ಖಾಲೀದ್ ಅಹ್ಮದ್ ತಾಳಿಕೋಟೆ, ಜಹೀರ್ ಅಹ್ಮದ್, ಶೇಖ ಮಹಿಬೂಬ್ ಒಂಟಿ, ಲಿಯಾಖತ್ ಹುಸೇನ್, ಅಬ್ದುಲ್ ರಹಿ ರಹೀಮ್ ಸೇರಿದಂತೆ ಇತರರಿದ್ದರು.

ಆರೋಗ್ಯ ಮೇಳದಲ್ಲಿ ಹಲವರು ಆರೋಗ್ಯ ಪರಿಶೀಲಿಸಿಕೊಂಡು ಮಾತ್ರೆ ಪಡೆದುಕೊಂಡರು. ರಕ್ತದಾನ ಶಿಬಿರದಲ್ಲಿ ಕೆಲವರು ರಕ್ತದಾನ ಮಾಡಿದರು. ಡೆಂಘೀ, ಮಲೇರಿಯಾ, ಕ್ಯಾನ್ಸರ್, ಕುಷ್ಟ, ಕ್ಷಯ, ಆನೆಕಾಲು ರೋಗಗಳಿಗೆ ಸಂಬಂಧಿಸಿದಂತೆ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

Share this article