ಶೀಘ್ರದಲ್ಲೇ ಹಂದಿ ಜೋಗರ ಕುಟುಂಬಕ್ಕೆ ನಿವೇಶನ: ಉಪ ಲೋಕಾಯುಕ್ತ ಬಿ.ವೀರಪ್ಪ

KannadaprabhaNewsNetwork | Published : Oct 21, 2024 12:34 AM

ಸಾರಾಂಶ

ತಗ್ಗಿನಲ್ಲಿರುವ ಗುಡಿಸಲುಗಳಲ್ಲಿ ನೀರು ನಿಂತು ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಕಂಡು ಬರುತ್ತಿದೆ. ಶೀಘ್ರವಾಗಿ ಎಲ್ಲರಿಗೂ ನಿವೇಶನ ಒದಗಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು. ಗುಬ್ಬಿಯಲ್ಲಿ ಹಂದಿ ಜೋಗರ ಕುಟುಂಬಗಳ ಗುಡಿಸಲುಗಳನ್ನು ಪರಿಶೀಲಿಸಿ ಭಾನುವಾರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಗ್ಗಿನಲ್ಲಿರುವ ಗುಡಿಸಲುಗಳಲ್ಲಿ ನೀರು ನಿಂತು ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಕಂಡು ಬರುತ್ತಿದೆ. ಶೀಘ್ರವಾಗಿ ಎಲ್ಲರಿಗೂ ನಿವೇಶನ ಒದಗಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.

ಪಟ್ಟಣಕ್ಕೆ ಭೇಟಿ ನೀಡಿ ಹಂದಿ ಜೋಗರ ಕುಟುಂಬಗಳ ಗುಡಿಸಲುಗಳನ್ನು ಪರಿಶೀಲಿಸಿ ಭಾನುವಾರ ಮಾತನಾಡಿದರು. ಈ ಪ್ರದೇಶವು ತಗ್ಗಿನಲ್ಲಿದೆ. ಆದ್ದರಿಂದ ನೀರು ನಿಲ್ಲುತ್ತಿದೆ. ನಿವಾಸಿಗಳು ತಾಲೂಕು ಆಡಳಿತ ನೀಡಿರುವ ಜಾಗಕ್ಕೆ ತುರ್ತಾಗಿ ತೆರಳುವಂತೆ ಸೂಚಿಸಿದರು.

ತಾಲೂಕು ಆಡಳಿತ ಈಗಾಗಲೇ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿದ್ದು, ಶೀಘ್ರವಾಗಿ ಹಕ್ಕುಪತ್ರ ವಿತರಣೆ ಮಾಡಲು ಸೂಚಿಸಲಾಗಿದೆ. ನಿವಾಸಿಗಳು ನಿಯಮಾನುಸಾರ ತಾಲೂಕು ಆಡಳಿತಕ್ಕೆ ಅಗತ್ಯವಿರುವ ದಾಖಲೆಗಳನ್ನು ನೀಡಿ ನಿವೇಶನ ಪಡೆದುಕೊಳ್ಳುವಂತೆ ತಿಳಿಸಿದರು.

ಸಮುದಾಯದ ಪೋಷಕರು ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ತೊಂದರೆ ಆಗದಂತೆ ಅವರನ್ನು ವಿದ್ಯಾರ್ಥಿನಿಲಯಗಳಿಗೆ ಸೇರಿಸಿ ಅವರ ವ್ಯಾಸಂಗ ಮುಂದುವರಿಸಲು ಸಹಕರಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅಗತ್ಯವಿರುವ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಕ್ಕೆ ತಿಳಿಸಿದರು.

ಇಲ್ಲಿನ ನಿವಾಸಿಗಳು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು. ನಂತರ ತಾಲೂಕು ಆಡಳಿತ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ವಸತಿ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು, ರೋಗಿಗಳ ಜತೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿ, ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ನೂರುನ್ನೀಸ, ಲೋಕಾಯುಕ್ತ ನ್ಯಾಯಾಧೀಶರಾದ ವಿಜಯಾನಂದ, ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಲಕ್ಷ್ಮೀನಾರಾಯಣ, ಉಮಾ ಶಂಕರ್, ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್, ಸಲೀಂ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಆರತಿ ಬಿ.,ಇಒ ಶಿವಪ್ರಕಾಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ್, ಬಿಸಿಎಂ ಅಧಿಕಾರಿ ಪವಿತ್ರ, ಸಮಾಜ ಕಲ್ಯಾಣ ಇಲಾಖೆಯ ವೀಣಾ ಇದ್ದರು.

Share this article