ಬೆಳ್ಮಣ್ಣು ದುರ್ಗಾಪರಮೇಶ್ವರಿ ದೇವಳದಲ್ಲಿ ಗೃಹ ಸಚಿವ ಚಂಡಿಕಾಯಾಗ

KannadaprabhaNewsNetwork |  
Published : Jul 09, 2025, 12:22 AM IST
೩೨ | Kannada Prabha

ಸಾರಾಂಶ

ಗೃಹಸಚಿವ ಡಾ. ಜಿ. ಪರಮೇಶ್ವರ್ ಮಂಗಳವಾರ ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಚಂಡಿಕಾಯಾಗ ನೆರವೇರಿಸಿದರು. ಬೆಳಗ್ಗೆ ಪತ್ನಿ ಕನ್ನಿಕಾ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿದ ಸಚಿವರು ಚಂಡಿಕಾಹೋಮದ ಎಲ್ಲಾ ಅನುಷ್ಠಾನಗಳಲ್ಲಿ ಭಾಗವಹಿಸಿ ಪೂರ್ಣಾಹುತಿ ನೀಡಿ ಪ್ರಸಾದ ಸ್ವೀಕರಿಸಿದರು.

ಲೋಕಕಲ್ಯಾಣಕ್ಕಾಗಿ ಸೇವೆ, ವೈಯಕ್ತಿಕ ಬೇಡಿಕೆ ಏನೂ ಇಲ್ಲ, ಶತ್ರುಗಳೂ ಇಲ್ಲ: ಡಾ.ಪರಮೇಶ್ವರ್‌ ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದಲ್ಲಿ ಸಪ್ಟಂಬರ್ ಕ್ರಾಂತಿಯ ವದಂತಿಗಳು ತೀವ್ರವಾಗುತ್ತಿರುವ ನಡುವೆಯೇ ಗೃಹಸಚಿವ ಡಾ. ಜಿ. ಪರಮೇಶ್ವರ್ ಮಂಗಳವಾರ ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಚಂಡಿಕಾಯಾಗ ನೆರವೇರಿಸಿದರು. ಬೆಳಗ್ಗೆ ಪತ್ನಿ ಕನ್ನಿಕಾ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿದ ಸಚಿವರು ಚಂಡಿಕಾಹೋಮದ ಎಲ್ಲಾ ಅನುಷ್ಠಾನಗಳಲ್ಲಿ ಭಾಗವಹಿಸಿ ಪೂರ್ಣಾಹುತಿ ನೀಡಿ ಪ್ರಸಾದ ಸ್ವೀಕರಿಸಿದರು.

ಹೋಮ ನಡೆಸಿಕೊಟ್ಟ ಬೆಳ್ಮಣ್ಣು ವಿಘ್ನೇಶ್ ಭಟ್ ಅವರು ಸಚಿವರ ಆಶಯದಂತೆ ರಾಜ್ಯದ ಶ್ರೇಯೋಭಿವೃದ್ಧಿಯ ಜೊತೆಗೆ ಸಚಿವರ ಮನಃಶಾಂತಿ, ಕಂಟಕ ನಿವಾರಣೆ, ಧೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪರಮೇಶ್ವರ್‌, ಮಂಗಳೂರಿನಲ್ಲಿ ನಡೆಯುವ ಶಾಂತಿ ಸಭೆಗೆ ಬಂದಿದ್ದೇನೆ, ಬರುವಾಗ ಶ್ರೀಮತಿಯವರು ‘ನಾನು ಬರ್ತೇನೆ’ ಅಂದರು, ಅವರಿಗೆ ಬೇಡ ಅನ್ನೋಕಾಗುತ್ತಾ ? ಆದ್ದರಿಂದ ಅವರನ್ನೂ ಕರಕೊಂಡು ಬಂದಿದ್ದೇನೆ, ಶಾಸ್ತ್ರೋಕ್ತವಾಗಿ, ಜನಕಲ್ಯಾಣ, ಲೋಕಕಲ್ಯಾಣಕ್ಕಾಗಿ ಪೂಜೆ ನಡೆಸಿದ್ದೇನೆ, ರಾಜ್ಯದ ಹಿತ ಕಾಪಾಡಲು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಈ ಪೂಜೆಯಲ್ಲಿ ವಿಶೇಷತೆ ಏನೂ ಇಲ್ಲ. 2013ರಲ್ಲಿ ನಾನು ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿದ್ದಾಗ ಇಲ್ಲಿಗೇ ಬಂದು ಯಾಗ ಮಾಡಿಸಿ ಪಕ್ಷ ಗೆಲವಿಗೆ ಪ್ರಾರ್ಥಿಸಿದ್ದೆ, ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು, ಆದರೆ ಈಗ ದೇವರಿಂದ ವಿಶೇಷವಾಗಿ ಏನೋ ಕೇಳಲು ಬಂದಿದ್ದೇನೆ ಎಂಬ ಕಲ್ಪನೆ ಬೇಡ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕೇಳಿದ್ದೇನೆ, ಸ್ವಾಭಾವಿಕವಾಗಿ ಆ ಪ್ರಾರ್ಥನೆಯ ಪ್ರಯೋಜನ ನಮಗೂ ಆಗುತ್ತದೆ. ಪುರೋಹಿತರು ಜನಸಮುದಾಯಕ್ಕೆ ಶಾಂತಿ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ, ಜನ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಿದಾಗ ಅದರೊಳಗೆ ನನ್ನ ಪ್ರಾರ್ಥನೆಯೂ ಸೇರುತ್ತೆ. ನನಗಾಗಿ ಪ್ರತ್ಯೇಕವಾಗಿ ಏನೂ ಪ್ರಾರ್ಥನೆ ಮಾಡಿಲ್ಲ ಎಂದರು.ಹೋಮ ಮಾಡಿದ್ದು ಶತ್ರನಾಶಕ್ಕಲ್ಲ, ನಾನು ಲೋಕಕಲ್ಯಾಣಕ್ಕೆ ಹೋಮ ಮಾಡಿಸಿದ್ದು, ನನಗೆ ಯಾರು ಶತ್ರುಗಳಿಲ್ಲ, ಯಾರಾದ್ರೂ ಇದ್ರೆ ನೀವೇ ಹುಡುಕಿ ಕೊಡಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಬದಲಾವಣೆ ಇಲ್ಲ

ಸರ್ಕಾರದಲ್ಲಿ ಯಾವುದೇ ರೀತಿಯ ಬದಲಾವಣೆ ನಾವು ಬಯಸುವುದಿಲ್ಲ. ವಿಶೇಷ ಸಂಪುಟ ಸಭೆ ಮಾಡಿದಾಗ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದ್ದರಿಂದ ಪದೇಪದೇ ಅದರ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದು ಡಾ.ಪರಮೇಶ್ವರ್ ಸ್ಪಷ್ಟಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ರಂಭಾಪುರಿ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಹಳ ಜನ ಅವರಾಗ್ಬೇಕು, ಇವರಾಗಬೇಕು ಅಂತ ಹೇಳ್ತಾರೆ, ವಿಧವಿಧವಾದ ವ್ಯಾಖ್ಯಾನಗಳನ್ನು ಕೊಡುತ್ತಾರೆ, ಅವೆಲ್ಲವೂ ಸತ್ಯವಾಗುತ್ತದೆ ಅನ್ನೋಕಾಗಲ್ಲ, ದೇವರೇ ನೋಡಬೇಕು ಎಂದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ದೆಹಲಿಗೆ ಅಧಿಕೃತ ಭೇಟಿಗೆ ಹೋಗುತ್ತಿದ್ದಾರೆ. ಸರ್ಕಾರದ ಕಾರ್ಯನಿಮಿತ್ತ ಬುಧವಾರ ಬೆಳಗ್ಗೆ ಹೋಗುತ್ತಾರೆ. ಮಾಧ್ಯಮಗಳು ಊಹೆ ಮಾಡಿದ ಹಾಗೆ ಏನೂ ಇಲ್ಲ ಎಂದರು.ಹಣದ ಕೊರತೆ ಇಲ್ಲ: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರ್ಯಾರು ಏನೇನು ಕಲ್ಪನೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ, ಈ ಗ್ಯಾರಂಟಿಗಳನ್ನು ಪ್ರಣಾಳಿಕೆ ಅಧ್ಯಕ್ಷನಾಗಿ ಹೈಕಮಾಂಡ್ ಜೊತೆ ಸೇರಿ ನಾನೇ ಬರೆದಿದ್ದು. ಜವಾಬ್ದಾರಿ ಸ್ಥಾನದಿಂದ ಹೇಳುತ್ತಿದ್ದೇನೆ. ಈ ಗ್ಯಾರೆಂಟಿಗಳಿಂದ ಯಾವುದೇ ತೊಂದರೆ ಆಗಿಲ್ಲ.

ಕೇವಲ 16 ಸಾವಿರ ಕೋಟಿ ವ್ಯತ್ಯಾಸವನ್ನು ನಿರ್ವಹಣೆ ಮಾಡುವ ಶಕ್ತಿ ನಮಗೆ ಇದೆ, ಹಣಕಾಸಿನ ಯಾವುದೇ ಕೊರತೆ ಇಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ