ಕನ್ನಡಪ್ರಭ ವಾರ್ತೆ ಬೀದರ್
ಕಾರ್ಪೋರೇಟ್ ಹಾಗೂ ರಾಜಕೀಯ ಸುಳಿಗೆ ಸಿಲುಕಿರುವ ಪತ್ರಿಕೋದ್ಯಮ ಮುದುಡಿ ಹೋಗಿದ್ದರೂ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಪತ್ರಕರ್ತರಿಂದಾಗಿ ಪತ್ರಿಕಾ ಧರ್ಮ, ವೃತ್ತಿಪರತೆಯ ಕಿಚ್ಚು ಕಮ್ಮಿಯಾಗಲ್ಲ ಎಂದು ಹಿರಿಯ ಪತ್ರಕರ್ತ ಗಂಧರ್ವ ಸೇನಾ ನುಡಿದರು.ಇಲ್ಲಿನ ರೋಟರಿ ಕ್ಲಬ್ ಐಎಂಎ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪತ್ರಿಕಾರಂಗ ಅತ್ಯಂತ ಪವಿತ್ರವಾದುದು. ಆದರೆ ಕಾಲ ಬದಲಾಗುತ್ತಿದ್ದಂತೆ ಅದರ ಸ್ವರೂಪದಲ್ಲಿ ಬದಲಾವಣೆ ಕಾಣುತ್ತಿರುವುದು ಸಮಾಜಕ್ಕೂ ಮಾರಕವಾದುದು ಎಂದರು.
ಹಿರಿಯ ಪತ್ರಕರ್ತ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಸದಾನಂದ ಜೋಶಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಸ್ವಾರ್ಥ ಸಾಧನೆಗಾಗಿ ಪತ್ರಿಕಾರಂಗ ಬಳಸಲಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ರಾಜಕಾರಣಿ ಹಾಗೂ ಉದ್ಯಮಿಗಳ ಕೈಗೆ ಪತ್ರಿಕೋದ್ಯಮ ಸಿಲುಕಿಕೊಂಡಿದೆ. ಇದರಿಂದ ಪತ್ರಿಕೆಗಳ ಮೇಲಿರುವ ವಿಶ್ವಾಸಾರ್ಹತೆಯ ಮೇಲೆ ಓದುಗರು ಅನುಮಾನಿಸುವಂತಾಗಿದೆ ಎಂದು ಬೇಸರಿಸಿದರು.ಇನ್ನೋರ್ವ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ಪತ್ರಿಕೆಗಳಲ್ಲಿ ಬರುವ ಸುದ್ದಿಗಳಿಂದ ಸಮಾಜದಲ್ಲಿ ಈಗಲೂ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅಧಿಕಾರಿಗಳು ಸುದ್ದಿಯ ಜಾಡು ಹಿಡಿದು ಸುಧಾರಣೆಗೆ ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಸುದ್ದಿ ಸಂಬಂಧಿತ ವಿಚಾರವಾಗಿ ವೈಯಕ್ತಿಕ ಹಗೆತನ ರಾಜಕಾರಣಿಗಳಿಗೆ ಸಲ್ಲದು ಅಷ್ಟಕ್ಕೂ ಸುದ್ದಿಗಾರರು ಅದಕ್ಕೆ ಜಗ್ಗೋಲ್ಲ ಎಂಬುವುದನ್ನು ನಾವೆಲ್ಲ ತೋರಿಸಬೇಕಿದೆ ಎಂದರು.
ವರದಿಗಾರ ಮಲ್ಲಿಕಾರ್ಜುನ್ ಕಪ್ಪಿಗುಡ್ಡ ಅವರು ಮಾತನಾಡಿ, ಸಮಾಜದ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸುವುದಷ್ಟೇ ಅಲ್ಲ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕಲ್ಪಿಸಿಕೊಡುವ ಮತ್ತು ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದರು.ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಎಚ್‌ಕೆಇ ಸಂಸ್ಥೆಯ ನಿರ್ದೇಶಕ ಡಾ. ರಜನೀಶ ವಾಲಿ ಅವರು ಮಾತನಾಡಿ, ಪತ್ರಕರ್ತರಿಗೆ ಯಾರೂ ಮಿತ್ರರಿಲ್ಲ ಯಾರೂ ವೈರಿಗಳಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರು ಶ್ರಮಿಸುತ್ತಿದ್ದಾರೆ ಅವರ ಸೇವೆಯನ್ನು ಸ್ಮರಿಸಿದ ರೋಟರಿ ಕ್ಲಬ್ ಸದಾ ಶ್ಲಾಘನೀಯ ಎಂದರು.
ಉದ್ಯಮಿ ಬಸವರಾಜ ಧನ್ನೂರ್ಹಿ ಹಾಗೂ ಹಿರಿಯ ವೈದ್ಯ ಡಾ. ರಘು ಕೃಷ್ಣಮೂರ್ತಿ ಅವರುಗಳು ಮಾತನಾಡಿ, ಜನರನ್ನು ಅಭಿವೃದ್ಧಿ ಚಿಂತನೆಯತ್ತ ಸಾಗಿಸುವ, ಉತ್ತಮ ಹಾಗೂ ಸಂತೋಷದ ವರದಿಗಳನ್ನು ಮಾಡುವ ಮೂಲಕ ಓದುಗರನ್ನು ಸೆಳೆಯಲು ಪತ್ರಿಕೆಗಳು ಮುಂದಾಗಲಿ. ಆರೋಗ್ಯ ಪೂರ್ಣ ಪೈಪೋಟಿಯನ್ನು ಪತ್ರಿಕೆಗಳು ಸೃಷ್ಟಿಸಲಿ ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಸೋಮಶೇಖರ ಪಾಟೀಲ್ ಮಾತನಾಡಿದರು. ಸುರೇಶ ಚನಶೆಟ್ಟಿ ಸ್ವಾಗತಿಸಿ ರವೀಂದ್ರ ಮೂಲಗೆ ವಂದಿಸಿದರು. ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಪ್ರಮುಖರಾದ ಹಾವಶೆಟ್ಟಿ ಪಾಟೀಲ್, ಶಿವಶಂಕರ ಕಾಮಶೆಟ್ಟಿ, ಅಪ್ಪಾರಾವ್ ಸೌದಿ, ಚಂದ್ರಕಾಂತ ಕಾಡಾದಿ ಹಾಗೂ ಸೂರ್ಯಕಾಂತ ರಾಮಶೆಟ್ಟಿ ಸೇರಿದಂತೆ ಇತರರಿದ್ದರು.