ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ

KannadaprabhaNewsNetwork |  
Published : Nov 06, 2026, 04:00 AM ISTUpdated : Nov 06, 2026, 05:39 AM IST
honeytrap

ಸಾರಾಂಶ

ಹಾವೇರಿ ಮೂಲದ ಉದ್ಯಮಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ಮುಖಂಡ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದು, ಅವರನ್ನು ಅರೆಬೆತ್ತಲೆಗೊಳಿಸಿ, ಬೆದರಿಸಿ ಎರಡು ಚಿನ್ನದ ಉಂಗುರಗಳನ್ನು ಕಿತ್ತುಕೊಂಡು ಜತೆಗೆ 2 ಕೋಟಿ ರು. ನೀಡುವಂತೆ ಬೇಡಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು : ಹಾವೇರಿ ಮೂಲದ ಉದ್ಯಮಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ಮುಖಂಡ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದು, ಅವರನ್ನು ಅರೆಬೆತ್ತಲೆಗೊಳಿಸಿ, ಬೆದರಿಸಿ ಎರಡು ಚಿನ್ನದ ಉಂಗುರಗಳನ್ನು ಕಿತ್ತುಕೊಂಡು ಜತೆಗೆ 2 ಕೋಟಿ ರು. ನೀಡುವಂತೆ ಬೇಡಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ಎಸ್‌.ಬಸೂರು ಎಂಬುವರು ನೀಡಿದ ದೂರಿನನ್ವಯ ಶ್ರೀನಿಧಿ ಎಂಬ ಮಹಿಳೆ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?

ನಾನು ಹಾವೇರಿಯಲ್ಲಿ ಸಿಸಿ ಕ್ಯಾಮೆರಾ ಇನ್ಟ್ಸಾಲ್‌ ಮಾಡುವ ಕಂಪನಿ ನಡೆಸುತ್ತಿದ್ದೇನೆ. ನನ್ನ ಕಂಪನಿಗೆ ಕೆಲಸಗಾರರು ಬೇಕಾಗಿದ್ದಾರೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದೆ. ಆ ಜಾಹೀರಾತು ಗಮನಿಸಿದ್ದ ಮಹಿಳೆ, ಮೂರು ತಿಂಗಳ ಹಿಂದೆ ನನಗೆ ಕರೆ ಮಾಡಿದ್ದಳು. ಕೆಲಸ ಕೊಡಿಸುವಂತೆ ಕೋರಿದ್ದಳು. ನಂತರ, ಇಬ್ಬರೂ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದೆವು. ಆಕೆಯನ್ನು ಫೋಟೊಗಳಲ್ಲಿ ನೋಡಿದ್ದೆ. ನನ್ನ ಉದ್ಯಮದ ಬಗ್ಗೆ ತಿಳಿದುಕೊಂಡಿದ್ದ ಮಹಿಳೆ, ಕಂಪನಿಯಲ್ಲಿ 25 ಲಕ್ಷ ಹೂಡಿಕೆ ಮಾಡುವುದಾಗಿ ಹೇಳಿದ್ದಳು. ತನಗೆ ತಿಂಗಳಿಗೆ 50 ಸಾವಿರ ಲಾಭ ನೀಡುವಂತೆ ಬೇಡಿಕೆ ಇರಿಸಿದ್ದಳು. ಅದಕ್ಕೆ ನಾನೂ ಒಪ್ಪಿದ್ದೆ.

ಈ ಬಗ್ಗೆ ಮಾತನಾಡಲೆಂದು ಮಹಿಳೆ, ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಳು. ವ್ಯವಹಾರದ ಕುರಿತು ಚರ್ಚಿಸಲು ಅ.28ರಂದು ಬೆಂಗಳೂರಿಗೆ ಹೋಗಿದ್ದೆ. ಖಾಸಗಿ ಆಸ್ಪತ್ರೆಯಲ್ಲಿ ಪರಿಚಯಸ್ಥರೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರಿಂದ, ಅವರನ್ನು ಮಾತನಾಡಿಸಲು ಹೋದೆ. ಮಧ್ಯಾಹ್ನ ಕರೆ ಮಾಡಿದ್ದ ಮಹಿಳೆ, ರಾಜರಾಜೇಶ್ವರಿನಗರಕ್ಕೆ ಬರುವಂತೆ ಲೋಕೇಷನ್‌ ಕಳುಹಿಸಿದ್ದಳು. ಅದರಂತೆ, ಸಂಜೆ 7 ಗಂಟೆಗೆ ಹೋಟೆಲ್ ಬಳಿ ಹೋಗಿದ್ದೆ. ನನ್ನನ್ನು ಮಹಿಳೆಯೇ ಸಮೀಪದಲ್ಲಿದ್ದ ತನ್ನ ಮನೆಗೆ ಕರೆದೊಯ್ದಳು. ನಾನು ಅವರ ಮನೆಗೆ ಹೋದಾಗ, ಮೂವರು ಮಹಿಳೆಯರು ಅಲ್ಲಿದ್ದರು. ನಾನು ಬಂದಿದ್ದನ್ನು ನೋಡಿ, ಅವರೆಲ್ಲರೂ ಹೊರಟು ಹೋದರು.

ಮದುವೆಯಾಗಬೇಕು ಇಲ್ಲ 2 ಕೋಟಿ ಕೊಡಬೇಕು:

ಸ್ವಲ್ಪ ಹೊತ್ತಿನ ನಂತರ ಮಹಿಳೆಯು ನನ್ನನ್ನು ಕೊಠಡಿಗೆ ಕರೆದೊಯ್ದಳು. ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸಿ ನಗ್ನಗೊಳಿಸಿದಳು. ಕೊಠಡಿ ಬಾಗಿಲು ಹಾಕಿರಲಿಲ್ಲ. ಕೆಲ ನಿಮಿಷಗಳಲ್ಲಿಯೇ ಏಳು ಮಂದಿ ಪುರುಷರು, ಕೊಠಡಿಯೊಳಗೆ ಬಂದರು. ಮೊಬೈಲ್‌ನಲ್ಲಿ ನನ್ನ ವಿಡಿಯೊ ಚಿತ್ರೀಕರಿಸಿಕೊಂಡರು. ಮಹಿಳೆಯನ್ನು ಮದುವೆಯಾಗಬೇಕು. ಇಲ್ಲದಿದ್ದರೆ, ನಿನ್ನನ್ನು ಬಿಡುವುದಿಲ್ಲವೆಂದು ಬೆದರಿಸಿದರು. ನಂತರ, 2 ಕೋಟಿ ನೀಡುವಂತೆಯೂ ಬೇಡಿಕೆ ಇಟ್ಟರು.

ಅಷ್ಟು ಹಣವಿಲ್ಲವೆಂದು ಹೇಳಿದೆ. ಆಗ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಕಸಿದುಕೊಂಡರು. ಆರೋಪಿಗಳು ಹಣ ಹೊಂದಿಸಿಕೊಂಡು ತಂದುಕೊಡುವಂತೆ ಬೇಡಿಕೆ ಇಟ್ಟರು. ನಂತರ, ಬೆಂಗಳೂರಿನಲ್ಲಿದ್ದ ಹಾವೇರಿಯ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆಸಿಕೊಂಡು ಅವರ ಜತೆಗೆ ಮನೆಯಿಂದ ಹೊರಗೆ ಬಂದೆ. ಬಳಿಕ ಸ್ನೇಹಿತ ಬಳಿ ಚರ್ಚಿಸಿ ದೂರು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಳಸಿದ ಕಪ್‌ನಲ್ಲೇ ಪೆಪ್ಸಿ ಸರ್ವ್‌ ಮಾಡಿದ ಪಿವಿಆರ್ ತಿನಿಸು ಮಳಿಗೆ
ಬಿಎಂಟಿಸಿ ಬಸ್‌ ಪಾಸ್‌ ದರ ಹೆಚ್ಚಳ!