ಕುಶಾಲನಗರ: ಹೊನ್ನಾರು ಉತ್ಸವದ ಹೊನ್ನಾರು ಉಳುಮೆ ಆರಂಭ

KannadaprabhaNewsNetwork | Published : Apr 2, 2025 1:02 AM

ಸಾರಾಂಶ

ಫೂರ್ವಿಕರು ಮೊದಲಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊನ್ನಾರು ಉತ್ಸವವು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಂಸ್ಕೃತಿ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಉತ್ತರ ಕೊಡಗಿನ ಕುಶಾಲನಗರ ತಾಲೂಕಿನ ತೊರೆನೂರು, ಶಿರಂಗಾಲ, ಹುಲುಸೆ, ಮಣಜೂರು, ಕೂಡ್ಲೂರು ಮುಂತಾದ ಗ್ರಾಮಗಳಲ್ಲಿ ನಡೆದ ಹೊಸ ವರ್ಷದ ಆರಂಭ ದಿನವಾದ ಭಾನುವಾರ ಯುಗಾದಿ ಹಬ್ಬದ ಸಂದರ್ಭದಲ್ಲಿ ರೈತರು ಜಾನುವಾರುಗಳೊಂದಿಗೆ ಹೊನ್ನಾರು ಉತ್ಸವದ ಮೂಲಕ ಹೊನ್ನಾರು ಉಳುಮೆ ಆರಂಭಿಸಿದರು.

ಹೊಸ ಪಂಚಾಂಗದ ಪ್ರಕಾರ ತೊರೆನೂರು ಗ್ರಾಮದಲ್ಲಿ ರೈತ ಟಿ.ಎಸ್.ಗಣೇಶ್ ಹಾಗೂ ಶಿರಂಗಾಲ ಗ್ರಾಮದಲ್ಲಿ ಗಂಗಾ ಎಂಬ ರೈತ ಆಯಾ ಗ್ರಾಮದ ದೇವರ ಜಮೀನಿನಲ್ಲಿ ಮೊದಲ ಉಳುಮೆ ಆರಂಭಿಸಿದರು.

ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳಿಗೆ ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ರೈತರು ಹೊಸ ಉಡುಗೆ-ತೊಡಿಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿದರು. ಉತ್ಸವದ ಅಂಗವಾಗಿ ಹೋಳಿಗೆ, ಪಾಯಿಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸಿದರು.

ತೊರೆನೂರು ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರೆಲ್ಲ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಸೇರಿ, ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸುವ ಮೂಲಕ ಈಡುಗಾಯಿ ಹಾಕಿ ಹೊನ್ನಾರು ಉಳುಮೆಗೆ ಸಿದ್ಧತೆ ನಡೆಸಿದರು. ಹೊಸ ಪಂಚಾಂಗದಂತೆ ಗ್ರಾಮದ ರೈತ ಟಿ.ಎಸ್.ಗಣೇಶ್ ಅವರು ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು.

ದೇವಸ್ಥಾನದ ಅರ್ಚಕ ಟಿ.ಎಲ್.ಸೋಮಶೇಖರ್ ಭೂಮಿ ಪೂಜೆ ನಡೆಸಿದರು. ರೈತರು ಮೊದಲು ಬಸವೇಶ್ವರ ದೇವಸ್ಥಾನದ ಜಮೀನಿನಲ್ಲಿ ಉಳುಮೆ ಆರಂಭಿಸಿದರು. ಹೊನ್ನಾರುಗಳು ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಬಸವೇಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ನಂತರ ರೈತ ಗಣೇಶ್ ಅವರನ್ನು ಹಿಂಬಾಲಿಸುವ ಮೂಲಕ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿ ಸಂಭ್ರಮಿಸಿದರು. ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸಿದರು.

ತೊರೆನೂರು ಗ್ರಾಮದಲ್ಲಿ ನಡೆದ ಹೊನ್ನಾರು ಆಚರಣೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್, ಗೌರವಾಧ್ಯಕ್ಷ ಟಿ.ಡಿ.ಈಶ್ವರ್, ಉಪಾಧ್ಯಕ್ಷ ಟಿ.ಬಿ.ಚಿದಾನಂದ,

ಕಾರ್ಯದರ್ಶಿ ಟಿ.ಎಲ್.ಮಹೇಶ್ ಕುಮಾರ್, ಸಾಹಿತಿ ಡಾ ಜೆ.ಸೋಮಣ್ಣ, ತಾಲೂಕು ‌ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಗ್ರಾ.ಪಂ.ಸದಸ್ಯ, ಟಿ.ಸಿ.ಶಿವಕುಮಾರ್, ಜನಪದ ಕಲಾವಿದ ಭರಮಣ್ಣ ಬೆಟಗೇರಿ, ದೇವಾಲಯ ಸಮಿತಿ ಸದಸ್ಯರಾದ ಟಿ.ಎಸ್.ತೋಟೇಶ್, ಟಿ.ಜಿ.ಶಿವಣ್ಣ, ಟಿ.ಕೆ.ವಸಂತ,

ಟಿ.ಎಂ.ಜಗದೀಶ ಮತ್ತಿತರರು ಇದ್ದರು.

ಶಿರಂಗಾಲ ಗ್ರಾಮದಲ್ಲಿ ನಡೆದ ಹೊನ್ನಾರು ಉತ್ಸವದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಎಸ್.ಜೆ.ಉಮೇಶ್, ಕಾರ್ಯದರ್ಶಿ ಎಂ.ಎಸ್.ಗಣೇಶ್ ಇತರರು ಇದ್ದರು.

ತೊರೆನೂರು ಗ್ರಾಮದಲ್ಲಿ ನಡೆದ ಹೊನ್ನಾರು ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಡಾ ಜೆ.ಸೋಮಣ್ಣ ಮಾತನಾಡಿ, ಎತ್ತುಗಳ ಬದಲಿಗೆ ಯಂತ್ರವನ್ನು ಬಳಸುವ ಇಂದಿನ ಆಧುನಿಕ ಯುಗದಲ್ಲಿಯೂ ರೈತರು ಹಬ್ಬವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು

ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪೂರ್ವಿಕರು ಮೊದಲಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊನ್ನಾರು ಉತ್ಸವವು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಂಸ್ಕೃತಿಯನ್ನು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

Share this article