ಬಸವಣ್ಣನ ಪೂಜಿಸಿ ಹೊನ್ನುಗ್ಗಿಯ ಹಬ್ಬ ಆಚರಿಸಿದ ಅನ್ನದಾತರು

KannadaprabhaNewsNetwork |  
Published : Jun 12, 2025, 03:05 AM IST
ಲಕ್ಷ್ಮೇಶ್ವರ ಪಟ್ಟಣದ ಲಿಂಬಯ್ಯಸ್ವಾಮಿಮಠ ಅವರ ನಿವಾಸದಲ್ಲಿ ಹೊನ್ನ ಹುಗ್ಗಿಯ ಅಂಗವಾಗಿ ಎತ್ತುಗಳಿಗೆ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಬುಧವಾರ ರೈತರು ಹೊನ್ನಹುಗ್ಗಿ ಆಚರಿಸಿದರು. ಎತ್ತುಗಳ ಮೈ ತೊಳೆದು, ಮೈಗೆಲ್ಲ ಬಣ್ಣ ಬಳಿದು, ಕೊಂಬುಗಳಿಗೆ ಬಂಗಾರ ಅಥವಾ ಬೆಳ್ಳಿಯ ಕೊಂಬೆಣಸುಗಳನ್ನು ಹಾಕಿ, ಝೂಲ ತೊಡಿಸಿ ಶೃಂಗರಿಸಿ, ಅವುಗಳ ಪಾದಪೂಜೆ ಮಾಡಿದರು.

ಲಕ್ಷ್ಮೇಶ್ವರ: ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಬುಧವಾರ ರೈತರು ಹೊನ್ನಹುಗ್ಗಿ ಆಚರಿಸಿದರು. ಎತ್ತುಗಳ ಮೈ ತೊಳೆದು, ಮೈಗೆಲ್ಲ ಬಣ್ಣ ಬಳಿದು, ಕೊಂಬುಗಳಿಗೆ ಬಂಗಾರ ಅಥವಾ ಬೆಳ್ಳಿಯ ಕೊಂಬೆಣಸುಗಳನ್ನು ಹಾಕಿ, ಝೂಲ ತೊಡಿಸಿ ಶೃಂಗರಿಸಿ, ಅವುಗಳ ಪಾದಪೂಜೆ ಮಾಡಿದರು.

ಎತ್ತುಗಳು ಅನ್ನದಾತನ ಕಣ್ಣುಗಳು ಇದ್ದ ಹಾಗೆ. ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗುತ್ತಿರುವಂತೆ ಬರುವ ಹಬ್ಬ ಕಾರ ಹುಣ್ಣಿಮೆಯು ರೈತರ ಪಾಲಿಗೆ ವಿಶೇಷ ಹಬ್ಬವಾಗಿದೆ. ಅದರಲ್ಲೂ ಹೊನ್ನ ಹುಗ್ಗಿಯ ದಿನ ರೈತರ ಎತ್ತುಗಳಿಗೆ ಶೇಂಗಾ ಎಣ್ಣೆಯ ಜತೆಯಲ್ಲಿ ಅರಿಷಿಣ ಪುಡಿ ಸೇರಿಸಿ ಎತ್ತಿನ ನಾಲಿಗೆ ತಿಕ್ಕಿ ಸ್ವಚ್ಛಗೊಳಿಸುತ್ತಾರೆ. ಆನಂತರ ಅವುಗಳಿಗೆ ಸ್ನಾನ ಮಾಡಿಸಿ ವಿವಿಧ ರೀತಿಯಲ್ಲಿ ಶೃಂಗರಿಸುತ್ತಾರೆ. ಆನಂತರ ಮನೆಯಲ್ಲಿ ಅವುಗಳಿಗೆ ಪೂಜೆ ಸಲ್ಲಿಸಿ, ಬಂಗಾರವನ್ನು ಎತ್ತುಗಳ ಕೊಂಬು, ಹಣೆ ಹಾಗೂ ಪಾದಗಳಿಗೆ ಮುಟ್ಟಿಸುವ ಮೂಲಕ ನಿನ್ನ ದುಡಿಮೆಯ ಪ್ರತಿಫಲದಿಂದ ಈ ಬಂಗಾರ ನಮಗೆ ಸಿಕ್ಕಿದೆ, ಇದರ ನಿಜವಾದ ಒಡೆಯ ನೀನು ಎನ್ನುವ ಸಂದೇಶ ಇದರಲ್ಲಿ ಅಡಗಿದೆ. ಆನಂತರ ಎತ್ತುಗಳಿಗೆ ವಿವಿಧ ರೀತಿಯ ಭಕ್ಷ್ಯ ಭೋಜ್ಯಗಳನ್ನು ತಿನ್ನಿಸಿ ರೈತರು ಸಂಭ್ರಮಿಸುತ್ತಾರೆ. ಹೀಗೆ ಕಾರ ಹುಣ್ಣಿಮೆಯ ಹಬ್ಬದಲ್ಲಿನ ಹೊನ್ನ ಹುಗ್ಗಿಯ ವಿಶೇಷವಾಗಿದೆ ಎನ್ನುತ್ತಾರೆ ರೈತ ಸಮೂಹ.

ಆದರೆ ಇಂದು ರೈತರು ಎತ್ತುಗಳಿಗೆ ಬದಲಾಗಿ ಟ್ರ್ಯಾಕ್ಟರ್ ಇಟ್ಟುಕೊಂಡು ಯಾಂತ್ರೀಕರಣಕ್ಕೆ ಮಾರು ಹೋಗಿರುವ ಸಂದರ್ಭದಲ್ಲಿ ಕಾರ ಹುಣ್ಣಿಮೆ ಹಾಗೂ ಹೊನ್ನ ಹುಗ್ಗಿಯ ಆಚರಣೆ ಇನ್ನೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿರುವುದು ಸಂತೋಷದ ಸಂಗತಿಯಾಗಿದೆ ಎನ್ನುತ್ತಾರೆ ರೈತರು.

ಹೊಳೆಆಲೂರ ಹೋಬಳಿಯಲ್ಲಿ ಕಾರು ಹುಣ್ಣಿಮೆ ಸಂಭ್ರಮ: ಹೊಳೆಆಲೂರ ಹೋಬಳಿಯ ವಿವಿಧೆಡೆ ರೈತರು ಮುಂಗಾರಿನ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು. ರೈತರು ತಮ್ಮ ಎತ್ತು, ಹೊರಿಗಳಿಗೆ ಮಾಡಿಸಿ ವಿವಿಧ ಬಗೆಯ ಅಲಂಕಾರ ಮಾಡಿ ಸಂಭ್ರಮಿಸಿದರು. ರೈತರ ಜೀವನಾಡಿಯಾಗಿರುವ ಎತ್ತುಗಳ ತಲೆಗೆ ಹೂವಿನ ಗೊಂಡೆ, ಕೊರಳಿಗೆ ಗೆಜ್ಜೆ, ದೇಹಕ್ಕೆ ಕೆಂಪು, ಹಳದಿ ಬಣ್ಣ ಹಚ್ಚಿ ಶೃಂಗಾರಗೊಳಿಸಿ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಸಂಜೆ ರೈತರು ತಮ್ಮ ನೆಚ್ಚಿನ ಎತ್ತುಗಳಿಂದ ಕರಿ ಹರಿಯುವ ಮೂಲಕ ಕಾರಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಇಲ್ಲಿಗೆ ಸಮೀಪದ ಬೆನಹಾಳ ಗ್ರಾಮದಲ್ಲಿ ಕೆಂಪು ಬಣ್ಣದ ಎತ್ತು ಕರಿ ಹರಿಯುವ ಮೂಲಕ ಗೋವಿನಜೋಳ, ತೊಗರಿ, ಕೆಂಪು ಜೋಳ ಹೀಗೆ ಮುಂಗಾರಿನ ಬೆಳೆ ಹೆಚ್ಚು ಬೆಳೆಯುವ ಸೂಚನೆ ನೀಡಿತು. ರೈತರು ಎತ್ತುಗಳಿಗೆ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಈ ಗ್ರಾಮದ ಗುರು ಹಿರಿಯರು, ಯುವಕರು ಕರಿ ಹರಿಯುವ ಸಂಭ್ರಮದಲ್ಲಿ ಭಾಗವಹಿಸಿದ್ದರು.

ಡಂಬಳ ಗ್ರಾಮದಲ್ಲಿ ಸಂಭ್ರಮದ ಕಾರ ಹುಣ್ಣಿಮೆ: ಡಂಬಳ ಗ್ರಾಮದಲ್ಲಿ ರೈತರು ಎತ್ತುಗಳನ್ನು ಓಡಿಸಿ ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮುಂಗಾರು ಬಿತ್ತನೆ ಸಮಯದಲ್ಲಿ ಡಂಬಳ ಗ್ರಾಮದಲ್ಲಿ ಪ್ರತಿವರ್ಷ ಶರಣು ಬಂಡಿಹಾಳ ಮನೆಯವರು ಬಿಳಿ ಮತ್ತು ಕಂದು ಬಣ್ಣದ ಎತ್ತುಗಳಿಗೆ ಪೂಜೆ ಸಲ್ಲಿಸಿದ ಬಳಿಕ ರೈತರು ಹಬ್ಬ ಆಚರಿಸುತ್ತಾರೆ. ಎತ್ತುಗಳನ್ನು ಅಲಂಕರಿಸಿ ಪೂಜಿಸುವ ಜತೆಗೆ ಇತರ ಸಂಪ್ರದಾಯ ಪಾಲಿಸುತ್ತಾರೆ.ಒಂದೇ ವೇದಿಕೆಯಲ್ಲಿ ಎತ್ತುಗಳನ್ನು ನಿಲ್ಲಿಸಿ ಕಾರ ಹುಣ್ಣಿಮೆ ಕರಿ ಹರಿಯಲು ಅವುಗಳನ್ನು ಓಡಿಸುವ ಕಾರ್ಯಕ್ರಮ ನಡೆಯಿತು. ಬಿಳಿ ಮತ್ತು ಕಂದು ಬಣ್ಣದ ಎತ್ತುಗಳನ್ನು ಡಂಬಳ ಗ್ರಾಮದಿಂದ ಮುಂಡರಗಿ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಓಡಿಸಲಾಯಿತು.

ಯಾವ ಬಣ್ಣದ ಹೋರಿ ಮೊದಲು ಕರಗಲ್‌ ಮುಟ್ಟುತ್ತದೆಯೋ ಅದೇ ಬಣ್ಣದ ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ ಎನ್ನುವುದು ರೈತರ ನಂಬಿಕೆ. ಬಿಳಿ ಮತ್ತು ಕಂದು ಬಣ್ಣದ ಎತ್ತುಗಳಲ್ಲಿ‌ ಬಿಳಿ ಮೊದಲು ಕರಗಲ್‌ ತಲುಪಿದ್ದರಿಂದ ಈ ವರ್ಷ ಪ್ರತಿ ಫಸಲು ಚೆನ್ನಾಗಿ ಬರುತ್ತದೆ ಎಂದು ರೈತರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಗ್ರಾಮದ ರೈತಾಪಿ ವರ್ಗ, ಹಿರಿಯರು, ಯುವಕರು ಇದ್ದರು.

ಕಾರು ಹುಣ್ಣಿಮೆ: ರೋಣದಲ್ಲಿ ಕರಿ ಹರಿದ ಕಂದು ಬಣ್ಣದ ಹೋರಿ

ಕಾರ ಹುಣ್ಣಿಮೆ ನಿಮಿತ್ತ ರೋಣ ಪಟ್ಟಣದ ಪೋತದಾರರಾಜನ ಕಟ್ಟೆ ಬಳಿಯ ಮುಖ್ಯ ರಸ್ತೆಯ ಅಗಸಿ ಬಾಗಿಲಿನಲ್ಲಿ ಬುಧವಾರ ಸಾಯಂಕಾಲ ಏರ್ಪಡಿಸಿದ ಕರಿ ಹರಿಯುವ ಸ್ಪರ್ಧೆಯಲ್ಲಿ ರೈತ ನಾಗಪ್ಪ ಈರಪ್ಪ ಪಲ್ಲೇದ ಎಂಬವರ ಕಂದು ಬಣ್ಣ ಹೋರಿ ಜಯಶಾಲಿಯಾಯಿತು.

ಕರಿ ಹರಿಯುವ ಸ್ಪರ್ಧೆಯಲ್ಲಿ ಪಟ್ಟಣದ ಹತ್ತಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಸುಮಾರು 110 ಅಡಿ ಎತ್ತರದಲ್ಲಿ ಅಡ್ಡಲಾಗಿ ಕರಿ ಕಟ್ಟಲಾಗಿತ್ತು. 50ಕ್ಕೂ ಹೆಚ್ಚು ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯು ಸುಮಾರು ಒಂದು ತಾಸಿನ ವರೆಗೂ ಜರುಗಿದ್ದು, ಹೋರಿಗಳು ಓಟದ ಭಂಗಿಯು ಕಣ್ಮನ ಸೆಳೆಯುವಂತಿತ್ತು.ಕಂದು ಬಣ್ಣದ ಬೆಳೆ ಹುಲುಸು ಸೂಚನೆ: ಈ ಬಾರಿ ಕಂದು ಬಣ್ಣದ ಹೋರಿ (ಎತ್ತು) ಕರಿ ಹರಿದಿದ್ದರಿಂದ ಕಂದು ಬಣ್ಣದ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ, ತೊಗರಿ, ಅಲಸಂದಿ, ಕಡಲೆ ಮುಂತಾದ ಬೆಳೆಗಳು ಹುಲುಸಾಗಿ ಬರುತ್ತವೆ ಎಂಬ ಸಂದೇಶವನ್ನು ರೈತರು ಅರ್ಥೈಸಿಕೊಂಡರು.

ಪಟ್ಟಣದ ಕಂಬಿಯವರ ಓಣಿ, ಗೌಡ್ರ ಓಣಿ, ತುಂಬದವರ ಓಣಿ, ತಳವಾರ ಓಣಿ, ಶ್ರೀನಗರ, ಶಿವಪೇಟಿ, ಲಿಂಗನಗೌಡ್ರ ಓಣಿ, ಗಾಣಿಗೇರ ಓಣಿ, ಹಕಾರಿಯವರ ಓಣಿ, ಹೊರಪೇಟಿ ಓಣಿ, ಕುರಬಗಲ್ಲಿ ಓಣಿ ಸೇರಿದಂತೆ ಪಟ್ಟಣದ ವಿವಿದ ಬಡಾವಣೆಗಳಿಂದ ಯುವಕರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಸಂಭ್ರಮಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ