ಮರ್ಯಾದೆಗೆಡು ಹತ್ಯೆ: 18 ಜನರ ಮೇಲೆ ಪ್ರಕರಣ ದಾಖಲು

KannadaprabhaNewsNetwork |  
Published : Dec 23, 2025, 02:15 AM IST
cxc | Kannada Prabha

ಸಾರಾಂಶ

ಗರ್ಭಿಣಿ ಮಾನ್ಯಾ ಮರ್ಯಾದೆಗೆಡು ಹತ್ಯೆಗೆ ಸಂಬಂಧಿಸಿದಂತೆ 18 ಮಂದಿ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದ ಗರ್ಭಿಣಿ ಮಾನ್ಯಾ ಮರ್ಯಾದೆಗೆಡು ಹತ್ಯೆ (ಕೊಲೆ)ಗೆ ಸಂಬಂಧಿಸಿದಂತೆ 18 ಮಂದಿ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಮಾನ್ಯಾ ಅವರ ಪತಿ ವಿವೇಕಾನಂದ ದೊಡ್ಡಮನಿ ನೀಡಿದ ದೂರಿನನ್ವಯ ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ ಹಾಗೂ ಅವರ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. 4ನೇ ಆರೋಪಿ ಮಾತ್ರ ಕಲಘಟಗಿಯ ದಾಸ್ತಿಕೊಪ್ಪದವರು. ಉಳಿದವರೆಲ್ಲ ಇನಾಂ ವೀರಾಪುರದವರಾಗಿದ್ದಾರೆ. ಪ್ರಕರಣದಲ್ಲಿ 10 ಮಂದಿ ಗಾಯಗೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (ಐಪಿಸಿ) ಅಡಿಯಲ್ಲಿ ಗಲಭೆ, ಕಾನೂನು ಬಾಹಿರವಾಗಿ ಗುಂಪುಗೂಡುವುದು, ಮಾರಕಾಸ್ತ್ರದಿಂದ ಹಲ್ಲೆ, ಕೊಲೆ, ಕೊಲೆ ಯತ್ನ, ಉದ್ದೇಶಪೂರ್ವಕ ದುಷ್ಕೃತ್ಯ, ಅಕ್ರಮ ಪ್ರವೇಶ, ಶಾಂತಿ ಕದಡುವ ಯತ್ನ, ಜೀವ ಬೆದರಿಕೆ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?

ಮಾನ್ಯಾ ಪಾಟೀಲ ಎಂಬುವರನ್ನು ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿವೇಕಾನಂದ ದೊಡ್ಡಮನಿ ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಮಾನ್ಯಾ ಕುಟುಂಬದವರು ಕೋಪಗೊಂಡಿದ್ದರು. ಭಾನುವಾರ ಸಂಜೆ 5 ಗಂಟೆಯ ವೇಳೆ ಇನಾಂ ವೀರಾಪುರ ಗ್ರಾಮದ ಹೊರವಲಯದ ಗಿರಿಯಾಲ ರಸ್ತೆಯಲ್ಲಿ ವಿವೇಕಾನಂದ ಅವರ ತಂದೆ ಮರಿಯಪ್ಪ, ಮಾವ ಸುನೀಲ ಅವರು ಬೈಕ್ ಮೇಲೆ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡಿಸಿ ಕೊಲೆಗೆ ಯತ್ನಿಸಿದ್ದರು.

ವಿಷಯ ತಿಳಿದು ವಿವೇಕಾನಂದ ಅವರು ಸ್ಥಳಕ್ಕೆ ಹೋದಾಗ ಅವರ ಮೇಲೆ, ಪ್ರಕಾಶಗೌಡ ಪಾಟೀಲ ಮತ್ತು ಆಕಾಶಗೌಡ ಪಾಟೀಲ ರಾಡ್ ಹಾಗೂ ಸ್ಪಿಂಕ್ಲರ್ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿಗಳೆಲ್ಲ ಗುಂಪುಗೂಡಿ, ವಿವೇಕಾನಂದ ಅವರ ಮನೆಗೆ ಹೋಗಿ ಅವಾಚ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ.

ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಿಸಿಟಿವಿ ಕ್ಯಾಮೆರಾ ಕಿತ್ತುಹಾಕಿದ್ದಾರೆ. ನಂತರ ವಿವೇಕಾನಂದ ಅವರ ತಾಯಿ ರೇಣುಕಾ ಹಾಗೂ ಪತ್ನಿ ಮಾನ್ಯಾ ಅವರ ಮೇಲೆ ಕೊಡಲಿ, ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಲು ಮುಂದಾದ ಯಲ್ಲಪ್ಪ ದೊಡ್ಡಮನಿ, ಸಂಗೀತಾ ದೊಡ್ಡಮನಿ, ಉವಮ್ಮಾ ದೊಡ್ಡಮನಿ, ಅನನ್ಯಾ ದೊಡ್ಡಮನಿ ಅವರಿಗೆ ಜೀವ ಬೆದರಿಕೆ ಹಾಕಿ, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾಳುಗಳಿಗೆ ಆತ್ಮಸ್ಥೈರ್ಯ, ತಾಳ್ಮೆ ಅಗತ್ಯ: ಅಕ್ಷಯ ಪಾಟೀಲ
ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ತಲಾದಾಯ ಹೆಚ್ಚಳ