ಹೂವಿನಹಡಗಲಿ: ರಸಗೊಬ್ಬರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರೈತರಿಗೆ ಆರ್ಥಿಕ ಹೊರೆ ಉಂಟಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ರಾಜ್ಯ ರೈತ ಸಂಘ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ವೆಚ್ಚದ ಈ ಹೊರೆ ರೈತರ ಬೆನ್ನುಮೂಳೆ ಮುರಿದಂತಾಗಿದೆ. ರೈತರ ಹಿತದೃಷ್ಟಿಯಿಂದ ರಸಗೊಬ್ಬರಗಳ ಬೆಲೆ ಕೂಡಲೇ ಇಳಿಸಬೇಕು, ಇಲ್ಲವೇ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಹೆಚ್ಚುವರಿ ಸಹಾಯಧನ ಒದಗಿಸಬೇಕೆಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಡೀಸೆಲ್ ರಿಯಾಯ್ತಿ ದರದಲ್ಲಿ ಲಭ್ಯವಾಗುವಂತೆ ಮಾಡಬೇಕಿದೆ. ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕಿದೆ. ರಸಗೊಬ್ಬರಗಳ ಬೆಲೆ ಏರಿಕೆ ಮತ್ತು ಡೀಸೆಲ್ ದರ ಹೆಚ್ಚಳದಿಂದ ಕೃಷಿ ಉತ್ಪಾದನಾ ವೆಚ್ಚವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಉಳುಮೆ, ಬಿತ್ತನೆ, ಕೊಯ್ಲು ಮತ್ತು ಸಾಗಾಣಿಕೆಗೆ ಡೀಸೆಲ್ ಅತ್ಯಗತ್ಯವಾಗಿದೆ ಬೆಲೆ ಏರಿಕೆಯಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಜಿಲ್ಲಾ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ವಿಠಲ ನಾಯ್ಕ, ವಿ.ಬಿ. ಚನ್ನಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ.ಗನಿಸಾಬ್, ತಾಲೂಕ ಕಾರ್ಯ ಅಧ್ಯಕ್ಷ ಡಾಕ್ಯಾ ನಾಯ್ಕ, ಕಾರ್ಯದರ್ಶಿ ವೆಂಕಟೇಶ್ ನಾಯ್ಕ, ಜಿಲ್ಲಾ ಕಾರ್ಯದರ್ಶಿ ದುರುಗಪ್ಪ, ಭೋಜ್ಯನಾಯ್ಕ, ದವಲ್ ಸಾಬ್, ಶೇಖರ ನಾಯ್ಕ, ಬಸವರಾಜ್ ಸೇರಿದಂತೆ ಇತರರು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.