ಹೊಸಕೋಟೆ- ದಾಬಸ್‌ಪೇಟೆ ಹೆದ್ದಾರೀಲಿ ಭೀಕರ ಅಪಘಾತ : 7 ಜನರ ಪ್ರಾಣ ತೆಗೆದ ಜಾಲಿ ರೈಡ್

KannadaprabhaNewsNetwork |  
Published : Feb 14, 2026, 01:45 AM ISTUpdated : Feb 14, 2026, 07:00 AM IST
Accident

ಸಾರಾಂಶ

 ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯ ಎಂ.ಸತ್ಯವಾರ ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸೇರಿದಂತೆ ಒಂದೆ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರ್ಘಟನೆಯೊಂದು ಸಂಭವಿಸಿದೆ

ಹೊಸಕೋಟೆ: ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯ ಎಂ.ಸತ್ಯವಾರ ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸೇರಿದಂತೆ ಒಂದೆ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರ್ಘಟನೆಯೊಂದು ಸಂಭವಿಸಿದೆ.

ಶುಕ್ರವಾರ ಬೆಳಗಿನ ಜಾವ 4:30ರ ಸುಮಾರಿಗೆ ಎಕ್ಸುಯುವಿ ಕಾರು-ಬೈಕ್-ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ದೇವನಾಯಕನಹಳ್ಳಿಯ ಗಗನ್(26), ಕಾರಿನಲ್ಲಿದ್ದ ಕೊತ್ತನೂರು ನಿವಾಸಿ, ಆರ್‌ವಿ ಕಾಲೇಜು ವಿದ್ಯಾರ್ಥಿ ಅಶ್ವಿನ್ ನಾಯರ್(17), ಎಚ್‌ವಿಆರ್ ಲೇಔಟ್ ನಿವಾಸಿ ಸಿಎಂಆರ್ ಶಾಲೆ ವಿದ್ಯಾರ್ಥಿಗಳಾದ ಅರ್ಹನ್ ಶರೀಫ್(17), ಅಯನ್ ಅಲಿ(17), ಭರತ್(18), ಈತನ್ ಜಾರ್ಜ್(17) ಫರ್ಹಾನ್(17) ಮೃತ ದುರ್ದೈವಿಗಳು. ಅಪಘಾತದ ತೀವ್ರತೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

ವಿದ್ಯಾರ್ಥಿ ಅಯನ್‌ ಆಲಿಗೆ ಸೇರಿದ ಕಾರಿನಲ್ಲಿ ಸ್ನೇಹಿತರೆಲ್ಲಾ ಜಾಲಿ ರೈಡ್‌ಗೆ ಬಂದಿದ್ದರು. ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಹೋಗುವ ಸಂದರ್ಭದಲ್ಲಿ ಎಂ.ಸತ್ಯವಾರ ಬಳಿ ಕಾರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಗನ್ ಗಾಡಿ ಸಮೇತ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಹಾರಿ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬಳಿಕ ಬೈಕ್‌ಗೆ ಡಿಕ್ಕಿಯಾದ ಕಾರು ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ವೇಳೆ ಕ್ಯಾಂಟರ್ ವಾಹನದ ಆಕ್ಸೆಲ್ ತುಂಡಾಗಿ ಕ್ಯಾಂಟರ್ ಕೂಡ ಸರ್ವೀಸ್ ರಸ್ತೆಗೆ ಹಾರಿ ಪಲ್ಟಿಯಾಗಿ ಬಿದ್ದಿದೆ. ಇತ್ತ ಡಿಕ್ಕಿ ಮಾಡಿದ ಕಾರು ಕೂಡ ಅಪ್ಪಚ್ಚಿಯಾಗಿ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮನೆಯವರಿಗೆ ತಿಳಿಸದೆ ರೈಡ್:

ಮೃತ ಅಶ್ವಿನ್ ನಾಯರ್ ಮೂಲತಃ ಕೇರಳದ ಹುಡುಗ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ತಂದೆ ತಾಯಿ ಜೊತೆ ಬಂದು ನೆಲೆಸಿದ್ದ. ಶುಕ್ರವಾರ ಬೆಳಿಗ್ಗೆ ಸ್ನೇಹಿತರ ಜೊತೆ ಜಾಲಿ ರೈಡ್ ಬಂದಿದ್ದ ಅಶ್ವಿನ್ ಅಪಘಾತದಲ್ಲಿ ಮೃತಪಟ್ಟಿದ್ದ. ಪೊಲೀಸರು ಬೆಳಿಗ್ಗೆ ಮನೆಯವರಿಗೆ ಕರೆ ಮಾಡುವವರೆಗೆ ಅಶ್ವಿನ್ ಮನೆಯಲ್ಲಿ ಮಲಗಿದ್ದಾನೆಂದೇ ಪೋಷಕರು ಭಾವಿಸಿದ್ದರು. ಪೋಷಕರಿಗೆ ಗೊತ್ತಿಲ್ಲದಂತೆ ಸ್ನೇಹಿತರ ಜೊತೆ ಜಾಲಿ ರೈಡ್‌ ಹೋಗಿದ್ದು ದುರಂತಕ್ಕೀಡಾಗಿದ್ದಾನೆ.

ಮುಗಿಲು ಮುಟ್ಟಿದ ಆಕ್ರಂದನ:

ಮೃತ ವಿದ್ಯಾರ್ಥಿಗಳ ಶವಗಳನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದ ತಕ್ಷಣ ಮೃತ ವಿದ್ಯಾರ್ಥಿಗಳ ಪೋಷಕರು ಕುಟುಂಬ ಸಮೇತ ಆಸ್ಪತ್ರೆ ಬಳಿಗೆ ಆಗಮಿಸಿದರು. ಮಕ್ಕಳ ಮೃತ ದೇಹಗಳನ್ನು ಕಂಡ ಪೋಷಕರ ಆಕ್ರಂದ ಮುಗಿಲು ಮುಟ್ಟುತ್ತಿತ್ತು.

ಐಜಿಪಿ ಲಾಬುರಾಮ್ ಭೇಟಿ :

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಲಾಬೂರಾಮ್ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು. ಸ್ಥಳದಲ್ಲಿದ್ದ ಎಸ್ಪಿ ಚಂದ್ರಕಾಂತ್ ಅವರಿಂದ ಮಾಹಿತಿ ಪಡೆದರು. ಎಎಸ್ಪಿ ವೆಂಕಟೇಶ್ ಪ್ರಸಾದ್, ಡಿವೈಎಸ್ಪಿ ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ಉಂಟಾಗಿದ್ದ ಸಂಚಾರ ದಟ್ಟಣೆ ನಿಯಂತ್ರಣ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 ದೃಷ್ಟಿಹೀನ ತಾಯಿಗೆ ಆಸರೆಯಾಗಿದ್ದ ಗಗನ್

ಮೃತ ಬೈಕ್ ಸವಾರ ಗಗನ್ ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದ ನಿವಾಸಿ. ಈತ ತಂದೆಯನ್ನು ಕಳೆದುಕೊಂಡು ದೃಷ್ಟಿ ಹೀನ ತಾಯಿಯೊಂದಿಗೆ ನೆಲೆಸಿದ್ದನು. ಹೊಸಕೋಟೆ ಬಳಿ ಇರುವ ಚೊಕ್ಕಹಳ್ಳಿ-ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಸಫಲ್ ಮಾರ್ಕೆಟ್‌ನಲ್ಲಿ ಉದ್ಯೋಗ ಮಾಡುತ್ತಿದ್ದ. ಮಗನ ಅಕಾಲಿಕ ಸಾವಿನಿಂದ ಆತನ ದೃಷ್ಟಿಹೀನ ತಾಯಿಗೆ ಬರ ಸಿಡಿಲು ಬಡಿದಂತಾಗಿತ್ತು. ಆಕೆಯ ಬದುಕಿನಾಸರೆಯಾಗಿದ್ದ ಮಗ ಮಸಣ ಸೇರಿದ್ದನ್ನು ತಿಳಿದು ಆಕೆಯ ರೋಧನ ಮುಗಿಲು ಮುಟ್ಟಿತ್ತು.

ಭೀಕರ ಅಪಘಾತ ಆತಂಕ ಹುಟ್ಟಿಸುತ್ತಿದೆ. ಎಲ್ಲರೂ 17 ರ ವಯೋಮಾನದ ವಿದ್ಯಾರ್ಥಿಗಳು. ಯಾವ ಕಾರಣಕ್ಕಾಗಿ ಬಂದಿದ್ದರು ಎಂದು ತಿಳಿದಿಲ್ಲ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ನೀಡಲಾಗುವುದು. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಸಮಗ್ರ ತನಿಖೆ ಮಾಡುತ್ತೇವೆ.

-ಲಾಬೂರಾಮ್‌ ಕೇಂದ್ರ ವಲಯದ ಐಜಿಪಿ 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಕಾರ್ಯ ಜನಮೆಚ್ಚುಗೆ