ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಎಂ.ಹೊಸೂರು ಗೇಟ್‌ನ ಶೀರಪಟ್ಟಣದ ವಿಸ್ಡಮ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ವಿಸ್ಡಮ್ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಪಂಚ ಇನ್ನೇನು ಹಾಳಾಗುತ್ತಿದೆ ಎನ್ನುವಾಗ ಅದನ್ನು ಉಳಿಸುವ ಚೈತನ್ಯವಿರುವುದು ಕಲೆಗಳಿಗೆ ಮಾತ್ರ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜೊತೆಗೆ ಕಲಾವಿದರನ್ನಾಗಿಯೂ ಬೆಳೆಸಬೇಕು ಎಂದರು.
ಸಾಮಾನ್ಯ ಕುಟುಂಬದಲ್ಲಿ ಜನಸಿರುವ ಅನೇಕ ಮಹನೀಯರು ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅಂತಹ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಶಿಕ್ಷಣ ಪಡೆಯುವ ಮಕ್ಕಳು ಇಂಜಿನಿಯರ್, ವೈದ್ಯರು ಅಥವಾ ಎಂತಹ ಉನ್ನತ ಸ್ಥಾನಕ್ಕೇರಲಿ, ಅವರೊಳಗೆ ಕಲಾವಿದ ಮತ್ತು ಕಲಾಸ್ವಾದನೆಯ ಗುಣ ಇರುವಂತೆ ನೋಡಿಕೊಂಡರೆ ಅಂತಹ ಮಕ್ಕಳಿಂದ ಜಗತ್ತಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.ಶಿಕ್ಷಣ ಎನ್ನುವುದು ಜ್ಞಾನದ ಕಡೆಗೆ ಸಾಗುತ್ತಿದೆ. ಆದರೆ ಜ್ಞಾನ ಎಂಬುದು ಶಿಕ್ಷಣದ ಅಂತಿಮ ಗುರಿಯಲ್ಲ. ಜ್ಞಾನ ವಿವೇಕದ ಎತ್ತರಕ್ಕೆ ಹೋಗದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಶಿಕ್ಷಣದಲ್ಲಿ ಐಎಎಸ್ ತೇರ್ಗಡೆ ಹೊಂದಿದರೆ ಉನ್ನತ ಸ್ಥಾನಕ್ಕೇರಬಹುದು. ಆಡಳಿತಾತ್ಮಕ ಹುದ್ದೆಗಳಲ್ಲಿ ಅತಿ ದೊಡ್ಡ ಸ್ಥಾನವೆಂದರೆ ಸರ್ಕಾರದ ಮಟ್ಟದಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆ. ಐಎಎಸ್ ಅಧಿಕಾರಿಗಳಾದರೆ ರಾಷ್ಟ್ರಮಟ್ಟದಲ್ಲಿ ಹುದ್ದೆ ಪಡೆಯಬಹುದು. ಆದರೆ ಐಎಎಸ್ ಪಾಸ್ ಮಾಡಿ ಅಧಿಕಾರಿಯಾಗಿದ್ದವರು, ಉದ್ಯಮಿಗಳಾಗಿ ಕೋಟಿಗಟ್ಟಲೆ ಸಂಪಾದನೆ ಮಾಡಿದವರೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಉದಾಹರಣೆಗಳಿವೆ. ಈ ಶಾಲೆಯಲ್ಲಿ ವಿದ್ಯೆ ಕಲಿಯುವ ಮಕ್ಕಳನ್ನು ವಿವೇಕದೆತ್ತರಕ್ಕೆ ಕೊಂಡೊಯ್ಯುತ್ತೇವೆಂಬ ಉದ್ದೇಶಹೊಂದಿರುವ ಈ ಶಿಕ್ಷಣ ಸಂಸ್ಥೆ ಶಾಲೆಗೆ ವಿಸ್ಡಂ (ವಿವೇಕ) ಎಂಬ ಹೆಸರಿಟ್ಟಿರುವುದು ಬಹಳ ಅರ್ಥಪೂರ್ಣ ಎಂದರು.
ಸಮಾಜದಲ್ಲಿ ಎಲ್ಲರೊಂದಿಗೆ ಕೂಡಿ ಬದುಕಬೇಕೆಂದರೆ ಶಾಲೆಯಲ್ಲಿ ಶಿಕ್ಷಕರು ಪಾಠ, ಪ್ರವಚನ ಕಲಿಸುವ ಜೊತೆಗೆ ಮನೆಯಲ್ಲಿ ಪೋಷಕರು ಮಕ್ಕಳಿಗೆ ಸಾಕಷ್ಟು ಮೌಲ್ಯ, ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಅವರ ಕೈಗೆ ಪುಸ್ತಕ ಕೊಟ್ಟರೆ. ಪುಸ್ತಕಗಳು ಮಕ್ಕಳ ಕನಸನ್ನು ನನಸು ಮಾಡುತ್ತವೆ. ಒಂದು ಪುಸ್ತಕ ಮತ್ತು ಪೆನ್ನಿಗೆ ಒಬ್ಬ ವಿದ್ಯಾರ್ಥಿಯನ್ನು ಯಾವ ಮಟ್ಟಕ್ಕಾದರೂ ಬದಲಾಯಿಸುವ ಶಕ್ತಿ ಇದೆ ಎಂದು ಹೇಳಿದರು.
ಶ್ರೀ ಜೈಮಾರುತಿ ಚಾರಿಟಬಲ್ ಶಿಕ್ಷಣ ಸಂಸ್ಥೆ ಹಾಗೂ ವಿಸ್ಡಮ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಪ್ರೇಮ ತಿಮ್ಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕುಣಿಗಲ್ ವ್ಯಾಲಿ ಇಂಟರ್‌ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಗಣೇಶ್, ತಾಲೂಕಿನ ಹೊಸಕೊಪ್ಪಲಿನ ಬ್ರಿಲಿಯಂಟ್ ವ್ಯಾಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್, ಶಾಲೆಯ ಶಿಕ್ಷಕ ಬೋರೇಗೌಡ ಸೇರಿದಂತೆ ೮೦ಕ್ಕೂ ಹೆಚ್ಚು ಶಿಕ್ಷಕರು, ಸಿಬ್ಬಂದಿ ಸಹಸ್ರಾರು ಮಂದಿ ವಿದ್ಯಾರ್ಥಿ ಪೋಷಕರು ಇದ್ದರು.