ಪರಿಸರ ಸಂರಕ್ಷಣೆ ಪ್ರಜೆಗಳ ಆದ್ಯ ಕರ್ತವ್ಯ

KannadaprabhaNewsNetwork |  
Published : Jul 05, 2026, 01:15 AM IST
11 | Kannada Prabha

ಸಾರಾಂಶ

ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಅಷ್ಟೇ ಜವಾಬ್ದಾರಿಯಿಂದ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇವಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಪರಿಸರ ಸಂರಕ್ಷಣೆ ಪ್ರಜೆಗಳ ಸಂವಿಧಾನಬದ್ಧ ಆದ್ಯ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ತಿಳಿಸಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ವಕೀಲರ ಸಂಘ, ಹಾರ್ಟ್ ಫುಲ್ ನೆಸ್ ಇನ್ಸಿಟಿಟ್ಯೂಟ್ ಸಂಯುಕ್ತವಾಗಿ ಮೈಸೂರು ತಾಲೂಕು ಇಲವಾಲ ಹೋಬಳಿ ಯಲಚನಹಳ್ಳಿಯಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಅವರು ಶನಿವಾರ ಚಾಲನೆ ನೀಡಿ ಮಾತನಾಡಿದರು.ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಅಷ್ಟೇ ಜವಾಬ್ದಾರಿಯಿಂದ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇವಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂವಿಧಾನದ ಆರ್ಟಿಕಲ್ 51ರ ಅಡಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಅರಣ್ಯವನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದೇವಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.ಇಂದಿನ ಮಾನವ ಕುಲವು ತನ್ನ ಮೂಲಭೂತ ಕರ್ತವ್ಯಗಳನ್ನೇ ಮರೆತುಬಿಟ್ಟಿದೆ. ಪ್ರತಿಯೊಂದನ್ನೂ ನೆನಪಿಸಲು ನಮಗೊಂದು ದಿನಾಚರಣೆಯ ಅಗತ್ಯ ಬೀಳುತ್ತಿದೆ. ಆಚರಣೆಯ ದಿನ ಮಾತ್ರ ಪರಿಸರ ನೆನಪಿರುತ್ತದೆ. ಆದರೆ ಮರು ದಿನವೇ ನಾವು ಅದನ್ನು ಮರೆತು ಬಿಡುತ್ತೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ದಿನನಿತ್ಯವೂ ಕಾಡುತ್ತಿರುವ ಪರಿಸರ ಅಸಮತೋಲನ ಮತ್ತು ತೀವ್ರ ಉಷ್ಣ ಅಲೆಗಳಿಗೆ ಮಾನವನ ಸ್ವಾರ್ಥವೇ ಕಾರಣ. ಮಾನವನು ತನ್ನ ವೈಯಕ್ತಿಕ ಲಾಭಕ್ಕಾಗಿ ಮರಗಳನ್ನು ಕಡಿಯುತ್ತಿರುವುದರ ದುಷ್ಪರಿಣಾಮವನ್ನು ನಾವೀಗ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ ಎಂದರು.ಹಾರ್ಟ್‌ ಫುಲ್‌ ನೆಸ್ ಇನ್ಸ್ ಟಿಟ್ಯೂಟ್ ನೆಟ್ಟ ಸಸಿಗಳನ್ನು ಮುಂದಿನ 3 ವರ್ಷಗಳ ಕಾಲ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿರುವುದು ಶ್ಲಾಘನಿಯ. ಪ್ರತಿ ವರ್ಷ ಒಂದು ಲಕ್ಷ ಸಸಿಗಳನ್ನು ನೆಟ್ಟು, ಅವುಗಳನ್ನು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸಿದರೆ, ಅದು ಪರಿಸರಕ್ಕೆ ನಾವು ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗುತ್ತದೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇಂದು ಪ್ರಕೃತಿಯ ಸಮತೋಲನ ತಪ್ಪುತ್ತಿದ್ದು, ಕೃಷಿ ಹಾಗೂ ತೋಟಗಾರಿಕಾ ವಲಯಗಳು ಭೀತಿ ಎದುರಿಸುತ್ತಿವೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು ಇರಬೇಕಾದ ಮಿತಿಗಿಂತ ಅಧಿಕ ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ ಹಾಗೂ ಬಿಸಿಲಿನ ಬೇಗೆಯಂತಹ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇದು ನೇರವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.ಹವಾಮಾನ ಬದಲಾವಣೆಯಿಂದಾಗಿ ತೋಟಗಾರಿಕಾ ಬೆಳೆಗಳ ಜೈವಿಕ ಕ್ರಿಯೆಯಲ್ಲಿ ಏರುಪೇರಾಗುತ್ತಿದೆ. ಸಿ.ಪಿ.ಸಿ.ಆರ್.ಐ ವರದಿ ಪ್ರಕಾರ ಕೇವಲ 1 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಏರಿಕೆಯಿಂದಾಗಿ ತೆಂಗು ಇಳುವರಿಯಲ್ಲಿ ಶೇ.20 ರಷ್ಟು ಕುಸಿತ ಕಂಡು ಬಂದಿದೆ. ಇನ್ನು ಮಾವಿನ ಬೆಳೆಯಲ್ಲೂ ಡಿಸೆಂಬರ್- ಜನವರಿಯಲ್ಲಿ ಬರಬೇಕಾದ ಹೂವು, ಈಗ ಜೂನ್- ಜುಲೈ ತಿಂಗಳಲ್ಲೂ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ರೈತರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಅವರು ಹೇಳಿದರು.ದೇಶದಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ, ಆದರೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ. 1950ರಲ್ಲಿ ನಮ್ಮ ದೇಶದ ಜನಸಂಖ್ಯೆ 40 ಕೋಟಿಯಿದ್ದಾಗ ಆಹಾರ ಉತ್ಪಾದನೆ 50 ಮಿಲಿಯನ್ ಟನ್ ಇತ್ತು. ಇಂದು ಜನಸಂಖ್ಯೆ 150 ಕೋಟಿ ತಲುಪಿದ್ದರೂ ನಮ್ಮ ಆಹಾರ ಉತ್ಪಾದನೆ 350 ಮಿಲಿಯನ್ ಟನ್‌ ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಪರಿಸರ ರಕ್ಷಣೆ ಅತ್ಯಗತ್ಯ ಎಂದು ಅವರು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ, ಡಿಸಿಎಫ್ ಕೆ. ಪರಮೇಶ, ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಹಾರ್ಟ್‌ ಫುಲ್‌ ನೆಸ್ ಇನ್ಸ್ ಟಿಟ್ಯೂಟ್ ಕೆ. ಮಧುಸೂಧನ್, ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಚಂದ್ರಶೇಖರ್ ಹಂಚಿನಮನಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಮೊದಲಾದವರು ಇದ್ದರು. ಡಾ.ಜಿ. ಮಂಜುನಾಥ್ ಸ್ವಾಗತಿಸಿದರು. ಮಮತಲಕ್ಷ್ಮೀ ನಿರೂಪಿಸಿದರು. ಡಾ.ಐ.ಡಿ. ಲೋಕೇಶ್, ಮಧುಸೂದನ್ ತಂಡದವರು ಪರಿಸರ ಗೀತೆಗಳನ್ನು ಹಾಡಿದರು.----ಕೋಟ್...ಇಂದು ನಾವೆಲ್ಲರೂ ಸೇರಿ ಉತ್ಸಾಹದಿಂದ ಗಿಡಗಳನ್ನು ನೆಟ್ಟು ಮನೆಗೆ ಮರಳುತ್ತೇವೆ. ಆದರೆ, ಆ ಸಸಿಗಳನ್ನು ಮುಂದೆ ಹೇಗೆ ಪೋಷಿಸುತ್ತೇವೆ ಎಂಬುದು ಅತ್ಯಂತ ಮುಖ್ಯ. ನಮ್ಮ ಮಕ್ಕಳನ್ನು 10- 20 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸುವ ನಾವು, ಕನಿಷ್ಠ ಒಂದು ವರ್ಷವಾದರೂ ನೆಟ್ಟ ಗಿಡವನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೇ?.- ಎಸ್.ಜಿ. ಪಂಡಿತ್, ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್----ನಾವು ಕೇವಲ ಗಿಡ ನೆಡುವುದಷ್ಟೇ ಅಲ್ಲ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಿದೆ. ಇಂದು ನಾವು ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ತಿನ್ನುವ ಆಹಾರವನ್ನು ವಿಷವಾಗಿಸಿಕೊಂಡಿದ್ದೇವೆ. ಕೃಷಿಯಲ್ಲಿ ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಜೀವಿಗಳು ನಾಶವಾಗಿ, ಭೂಮಿ ಬಂಜರಾಗುತ್ತಿದೆ. ನೀರನ್ನು ಮರುಬಳಕೆ ಮಾಡುವುದು ಮತ್ತು ಜಾಗರೂಕತೆಯಿಂದ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.- ಡಾ. ವಿಷ್ಣುವರ್ಧನ, ಕುಲಪತಿ, ತೋಟಗಾರಿಕೆ ವಿಜ್ಞಾನಗಳ ವಿವಿ, ಬಾಗಲಕೋಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ