ಕನ್ನಡಪ್ರಭ ವಾರ್ತೆ ಪುತ್ತೂರು
ಗೇರು ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಗುರಿ, ವೈಜ್ಞಾನಿಕ ನರ್ಸರಿ ನಿರ್ವಹಣೆಗೆ ಒತ್ತು ಹಾಗೂ ಗೇರು ಬೆಳೆಗಾರರ ಆದಾಯವನ್ನು ದ್ವಿಗುಣಗೊಳಿಸುವ, ಗೇರು ಹಣ್ಣಿನ ಮೌಲ್ಯವರ್ಧನೆ ಮತ್ತು ಪೌಷ್ಟಿಕ ತೋಟಗಾರಿಕೆಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಎಸ್‌ಸಿಪಿಎಸ್ ನೋಡಲ್ ಅಧಿಕಾರಿಯಾದ ವಿಜ್ಞಾನಿ ಡಾ. ಮಂಜೇಶ್ ಜಿ.ಎನ್. ಅವರು ಗೇರು ಬೆಳೆಯ ವಾಣಿಜ್ಯ ನರ್ಸರಿ ನಿರ್ವಹಣೆ ಮತ್ತು ಪೌಷ್ಟಿಕ ತೋಟಗಾರಿಕೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಗೇರು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಜೆ. ದಿನಕರ ಅಡಿಗ ಗೇರು ಬೇಸಾಯದ ಅವಲೋಕನ ಮತ್ತು ಗೇರು ಸಂಶೋಧನೆಯ ಕುರಿತು ಮಾತನಾಡಿದರು.ಹಣ್ಣಿನ ವಿಜ್ಞಾನದ ವಿಜ್ಞಾನಿ ಡಾ. ವೀಣಾ ಜಿ.ಎಲ್ ಅವರು ಗೇರು ಹಣ್ಣಿನ ಮೌಲ್ಯವರ್ಧನೆಯ ಕುರಿತು ಮಾಹಿತಿ ನೀಡಿ ನಿರ್ದೇಶಾನಲಯದಲ್ಲಿ ಅಭಿವೃದ್ಧಿ ಪಡಿಸಿದ ಉತ್ಪನ್ನಗಳ ಕುರಿತು ಪರಿಚಯಿಸಿದರು. ವಿಜ್ಞಾನಿ ಡಾ. ತೊಂಡೈಮಾನ್ ವಿ. ಅವರು ಕಸಿ ತಂತ್ರಜ್ಞಾನದ ಬಗ್ಗೆ ತಿಳಿಸಿದರು. ತರಬೇತಿಯಲ್ಲಿ ೩೫ ರೈತ ಮಹಿಳೆಯರು ಭಾಗವಹಿಸಿದ್ದರು. ಶಿಬಿರಾರ್ಥಿಗಳಿಗೆ ಗೇರುವಿನಲ್ಲಿ ಸಮಗ್ರ ಕೃಷಿ ಮತ್ತು ಮಿಶ್ರ ಬೇಸಾದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು ಹಾಗೂ ಸುಭಾಷ್ ರೈ ಅವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಸಮಗ್ರ ಪರಿಚಯ ಮಾಡಿಸಲಾಯಿತು.