ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪಿಸಬೇಕು: ಶ್ರೀನಿವಾಸ ರೆಡ್ಡಿ

KannadaprabhaNewsNetwork |  
Published : Jan 11, 2024, 01:30 AM IST
ಚಿತ್ರ: 10ಎಚ್‍ಒಎಸ್2ಪಿ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿದ ಅಭಿಯಾನದ ರಥಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ದೃಷ್ಟಿಯಿಂದ ನಡೆಸಲಾದ ಕ್ಷೇತ್ರ ಮರುವಿಂಗಡಣೆ ನೀತಿಯಿಂದ ಹೊಸನಗರ ವಿಧಾನಸಭಾ ಕ್ಷೇತ್ರ ಸ್ವಾತಂತ್ರ್ಯ ಕಳೆದುಕೊಂಡಂತಾಗಿ, ಸಾಗರ-ಹೊಸನಗರ ಕ್ಷೇತ್ರ ಎಂದಾಗಿದೆ. ಪರಿಣಾಮ ಹೊಸನಗರ ತಾಲೂಕಿನಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಹಿನ್ನಡೆಯಾಗಿದೆ ಎಂದು ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸನಗರ

ದಶಕದ ಹಿಂದೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಸಾಗರ ಹಾಗೂ ತೀರ್ಥಹಳ್ಳಿಗೆ ಹರಿದು ಹಂಚಲಾಯಿತು. ಇದರಿಂದ ಕೆಲವು ವರ್ಷಗಳಿಂದ ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳಿದರು.

ತಾಲೂಕು ಗಡಿಗ್ರಾಮ ಪುರಪ್ಪೆಮನೆಯಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ‘ಜನಜಾಗೃತಿ ಅಭಿಯಾನ’ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಹೊಸನಗರ ಕ್ಷೇತ್ರದ ಮಟ್ಟಿಗೆ ವೈಜ್ಞಾನಿಕವಾಗಿಲ್ಲ. ಶರಾವತಿ, ವಾರಾಹಿ, ಚಕ್ರಾ ಹಾಗೂ ಸಾವೆಹಕ್ಕಲು ಜಲವಿದ್ಯುತ್ ಯೋಜನೆಯಲ್ಲಿ ಇಲ್ಲಿನ ಜನರನ್ನು ಸ್ಥಾನಪಲ್ಲಟ ಮಾಡಲಾಗಿದೆ ಎಂದು ಹೇಳಿದರು.

6 ದಶಕಗಳಿಂದ ಸಾವಿರಾರು ಕುಟುಂಬಗಳು ವಲಸೆಹೋಗಿವೆ. ಈ ಹಿಂದಿನ ಜನಗಣತಿ ಆಧಾರದ ಮೇಲೆ ಮುಳುಗಡೆ ಆಗದೇ ಇದ್ದಿದ್ದರೆ ಈಗಿನ ಜನಸಂಖ್ಯೆ 3 ಲಕ್ಷಕ್ಕೂ ಹೆಚ್ಚು ಮೀರುತ್ತಿತ್ತು. ದೇಶದ ವಿದ್ಯುತ್‍ಗಾಗಿ ತ್ಯಾಗ ಮಾಡಿದ ಈ ತಾಲೂಕಿನ ಜನರಿಗೆ ಅನ್ಯಾಯ ಆಗಿದೆ ಎಂದರು.

ಈಶಾನ್ಯ ರಾಜ್ಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ವಿಧಾನಸಭಾ ಕ್ಷೇತ್ರ ಸ್ಥಾನವನ್ನು ನೀಡಲಾಗಿದೆ. ಅದೇ ಮಾನದಂಡವನ್ನು ಹೊಸನಗರ ತಾಲೂಕು ಭಾಗಕ್ಕೂ ಅನ್ವಯಿಸಬೇಕು ಎಂಬುದು ಈ ಭಾಗದ ಜನರ ಆಶಯ ಎಂದ ಅವರು, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿರ್ವಾದ, ಮೂಲೆಗದ್ದೆ ಮಠದ ಚನ್ನಬಸವ ಶ್ರೀಗಳ ಸಾರಥ್ಯದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ದಿನಕ್ಕೆ 4 ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನದ ರಥ ಸಾಗಲಿದೆ ಎಂದರು.

ಪುರಪ್ಪಮನೆ ಗ್ರಾಪಂ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ರಾಘವೇಂದ್ರ, ಸಂತೋಷ, ಜಯಪ್ರಕಾಶ ಶೆಟ್ಟಿ, ಒಕ್ಕೂಟದ ಕಾರ್ಯದರ್ಶಿ ಚಿದಂಬರ್, ಮಂಜುನಾಥ ಬ್ಯಾಣದ್, ಬಿ.ಎಸ್. ಸುರೇಶ ಮತ್ತಿತರರು ಇದ್ದರು.

- - - -10ಎಚ್‍ಒಎಸ್2ಪಿ:

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಜನಜಾಗೃತಿ ಅಭಿಯಾನ ರಥಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಾಲನೆ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ