ಕನ್ನಡಪ್ರಭ ವಾರ್ತೆ ಅಥಣಿ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮುಂಬರುವ ದಿನಗಳಲ್ಲಿ ಈ 100 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದರ ಜೊತೆಗೆ ತಾಲೂಕಿನ 9 ಗ್ರಾಮಗಳಲ್ಲಿ ಆಯುಷ್ಮಾನ್ ಆರೋಗ್ಯ ಉಪಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ₹30 ಕೋಟಿ ವೆಚ್ಚದ 100 ಹಾಸಿಗೆ ಸೌಲಭ್ಯವುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಥಣಿಯಲ್ಲಿರುವ ಆಸ್ಪತ್ರೆಯನ್ನು ಶೀಘ್ರದಲ್ಲಿ 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಮೂಲಕ ಬಡ ರೋಗಿಗಳಿಗೆ ಆರೋಗ್ಯ ಉಚಿತ ಸೇವೆ ಒದಗಿಸುವ ಸಂಕಲ್ಪ ಹೊಂದಿದ್ದೇನೆ. ಅಲ್ಲದೆ ಶಿನ್ನಾಳ ಗ್ರಾಮದಲ್ಲಿ ₹3.20 ಕೋಟಿ ವೆಚ್ಚದಲ್ಲಿ ಹೈಟೆಕ್ ಆರೋಗ್ಯ ಸೌಲಭ್ಯವುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.₹65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಆರೋಗ್ಯ ಸಚಿವರಿಗೆ ಮತ್ತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಮ್ಮ ಬೇಡಿಕೆಗೆ ಸಹಮತಿಸಿದ್ದಾರೆ. ಇಂದಿನ ಈ ಶಂಕುಸ್ಥಾಪನೆ ಸಮಾರಂಭಕ್ಕೆ ಅವರು ಬರಬೇಕಿತ್ತು. ಆದರೆ, ಕಬ್ಬು ಬೆಳೆಗಾರರು ಮತ್ತು ರೈತ ಪರ ಸಂಘಟನೆಯವರು ಕಬ್ಬಿನ ದರ ನಿಗದಿ ಮಾಡುವಂತೆ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ ಅವರ ಪ್ರವಾಸ ರದ್ದಾಗಿದ್ದು, ಶಾಸಕ ರಾಜು ಕಾಗೆ ಮತ್ತು ನಾನು ಕವಲಗುಡ್ಡದ ಅಮರೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಆಸ್ಪತ್ರೆಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೇವೆ. ಬರುವ 12 ತಿಂಗಳಲ್ಲಿ ಮೊದಲ ಹಂತದ ಕಾರ್ಯವನ್ನು ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.ಶಾಸಕ ರಾಜು ಕಾಗೆ ಮಾತನಾಡಿ, ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ಉತ್ತಮ ಸೇವೆ ನಿಡುತ್ತಿದ್ದಾರೆ. ಇಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರತ್ಯೇಕವಾಗಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಉತ್ತಮ ಆರೋಗ್ಯಕ್ಕಾಗಿ ಆಹಾರ ಪದ್ಧತಿ ಮತ್ತು ವ್ಯಾಯಾಮ ಮತ್ತು ಯೋಗಾಸನ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿ, ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರತಿ ತಿಂಗಳು ಸಾವಿರಾರು ರೋಗಿಗಳು ಉಪಚಾರ ಪಡೆಯುತ್ತಿದ್ದಾರೆ. ಅನೇಕ ಹೈಟೆಕ್ ಸೌಲಭ್ಯಗಳನ್ನು ಒದಗಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ಎನಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ತಹಸೀಲ್ದಾರ ಸಿದ್ದರಾಯ ಭೋಸಗಿ. ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಜಿಲ್ಲಾ ಆರೋಗ್ಯ ಅಧಿಕಾರಿ ಈಶ್ವರ ಗಡಾದ, ಜಿಲ್ಲಾ ಆರೋಗ್ಯ ಅಧಿಕಾರಿ ಶರಣಪ್ಪ ಗಡೇದ, ಮುಖಂಡರಾದ ಪರಪ್ಪ ಸವದಿ, ಇತರರಿದ್ದರು ಡಾ. ಬಸಗೌಡ ಕಾಗೆ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹಚ್ಚರಾದ ನಿರೂಪಿಸಿ ವಂದಿಸಿದರು. ಸಾರ್ವಜನಿಕ ಆಸ್ಪತ್ರೆ ಮೂಲಕ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದ್ದು, ರಾಜ್ಯದ ಅತ್ಯುತ್ತಮ 10 ಆಸ್ಪತ್ರೆಗಳಲ್ಲಿ ಅಥಣಿ ಆಸ್ಪತ್ರೆ ಇರುವುದು ಹೆಮ್ಮೆ, ಸಂತಸ ತಂದಿದೆ. ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಒಳರೋಗಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಉತ್ತಮ ಸೇವೆಯ ಮೂಲಕ ತಾಲೂಕಿನ ಜನತೆಗೆ ಅಷ್ಟೇ ಅಲ್ಲದೆ ಬೇರೆ ತಾಲೂಕಿನ ಜನತೆಗೂ ಆರೋಗ್ಯ ಸೇವೆ ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ.
- ಲಕ್ಷ್ಮಣ ಸವದಿ, ಶಾಸಕ ಅಥಣಿ.ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ತಾಲೂಕಿನ ಜನರಿಗೆ ಮತ್ತು ಬಡ ರೋಗಿಗಳಿಗೆ ಉತ್ತಮ ಒದಗಿಸುವ ನಿಟ್ಟಿನಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಅವರ ಪ್ರಯತ್ನದಿಂದ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದ್ದಾರೆ. ಇದು ಸಂತಸ ತಂದಿದೆ.
-ಡಾ.ಬಸಗೌಡ ಕಾಗೆ, ತಾಲೂಕು ವೈದ್ಯಾಧಿಕಾರಿ.