ವಿವಿಧ ಬೇಡಿಕೆಗಳ ಈಡರಿಕೆಗೆ ಒತ್ತಾಯಿಸಿ ವಸತಿ ನಿಲಯ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : Sep 10, 2026, 01:15 AM IST
4 | Kannada Prabha

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಗಳಲ್ಲಿ ಕಾರ್ಮಿಕರು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕಾನೂನುಬದ್ಧವಾಗಿ ನೀಡಲೇಬೇಕಾದ ಕನಿಷ್ಠ ವೇತನ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆ, ಗಳಿಕೆ ರಜೆ ಹಾಗೂ ಇನ್ನಿತರ ಸೌಲಭ್ಯ ನೀಡುತ್ತಿಲ್ಲ. ಜತೆಗೆ ಕಳೆದ 3 ತಿಂಗಳಿಂದ ಕಾರ್ಮಿಕರಿಗೆ ವೇತನ ಸಹ ನೀಡಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ 3 ತಿಂಗಳ ಬಾಕಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜಿಪಂ ಎದುರು ಪ್ರತಿಭಟಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಗಳಲ್ಲಿ ಕಾರ್ಮಿಕರು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕಾನೂನುಬದ್ಧವಾಗಿ ನೀಡಲೇಬೇಕಾದ ಕನಿಷ್ಠ ವೇತನ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆ, ಗಳಿಕೆ ರಜೆ ಹಾಗೂ ಇನ್ನಿತರ ಸೌಲಭ್ಯ ನೀಡುತ್ತಿಲ್ಲ. ಜತೆಗೆ ಕಳೆದ 3 ತಿಂಗಳಿಂದ ಕಾರ್ಮಿಕರಿಗೆ ವೇತನ ಸಹ ನೀಡಿಲ್ಲ. 2020 ಹಾಗೂ 2021ರ ವೇಳೆ ನಾಲ್ಕು ತಿಂಗಳ ವೇತನ ಪಾವತಿಯಾಗಿಲ್ಲ. ನಮ್ಮ ಮನವಿ, ಪ್ರತಿಭಟನೆಗಳಿಗೆ ಯಾವುದೇ ಸ್ಪಂದನೆ ಸಿಗದಿದ್ದಾಗ ವೇತನ ಪಾವತಿ ಕಾಯ್ದೆಯಡಿ ಪ್ರಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಗಳಲ್ಲಿ 194 ಜನ ಕಾರ್ಮಿಕರಿಗೆ 92,91,221 ರೂ. ಪಾವತಿಸುವಂತೆ ಆದೇಶ ನೀಡಿ 4 ವರ್ಷವಾದರೂ ಬಾಕಿ ಹಣ ಪಾವತಿಸಿಲ್ಲ ಎಂದು ಅವರು ದೂರಿದರು.

ಈ ಕಾರ್ಮಿಕರ ಪೈಕಿ ಬಹುತೇಕರು ಮಹಿಳೆಯರಾಗಿದ್ದು, ತಮ್ಮ ಕುಟುಂಬದ ನಿರ್ವಹಣೆಯ ಏಕಮಾತ್ರ ಆಧಾರವಾಗಿದ್ದಾರೆ. ಇವರಿಗೆ ಸರ್ಕಾರ ಕನಿಷ್ಠ ವೇತನದ ಹೆಸರಿನಲ್ಲಿ ನಿಗದಿಪಡಿಸಿರುವ ಕೂಲಿಯೇ ಜೀವನಾಧಾರವಾಗಿದೆ. ಒಂದು ಕಡೆ ಸಂಬಳವಿಲ್ಲದೇ, ಇನ್ನೊಂದು ಕಡೆ ಸಂಬಳ ಕೊಟ್ಟಿಲ್ಲ ಎಂದು ನ್ಯಾಯಾಲಯಕ್ಕೆ ಹೋದರೆ ಇವರ ಪರವಾಗಿ ಆದೇಶವಾಗಿ 4- 5 ವರ್ಷಗಳು ಕಳೆದರೂ ವೇತನವಿಲ್ಲದೇ ಹೈರಾಣಾಗಿದೆ ಎಂದರು.

ಎಲ್ಲಾ ಕಾರ್ಮಿಕರಿಗೆ ಬಾಕಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ನ್ಯಾಯಾಲಯದ ಆದೇಶದಂತೆ 194 ಜನರಿಗೆ ಬಾಕಿ ಇರುವ 92,91,221 ರು.ಗಳನ್ನು ಕೂಡಲೇ ಪಾವತಿಸಬೇಕು. ಎಲ್ಲಾ ಕಾರ್ಮಿಕರಿಗೆ ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆ, ಗಳಿಕೆ ರಜೆಗಳನ್ನು ಕಾಯ್ದೆಯನ್ವಯ ನೀಡಬೇಕು. ಕ್ಷುಲ್ಲಕ ಕಾರಣ ನೀಡಿ ಕೆಲಸದಿಂದ ತೆಗೆದುಹಾಕಿರುವ ಕಾರ್ಮಿಕರಿಗೆ ತಕ್ಷಣವೇ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎನ್. ಮುದ್ದುಕೃಷ್ಣ, ಜಿಲ್ಲಾ ಕಾರ್ಯದರ್ಶಿ ಬಿ. ರಾಜೇಶ್, ಮುಖಂಡರಾದ ವಿ. ಯಶೋಧರ್, ಚಂದ್ರಶೇಖರ್ ಮೇಟಿ, ಪವಿತ್ರಾ, ಶಿವಾನಂದ, ಎಂ.ಎ. ಲೋಕೇಶ್, ಮಹದೇವಮ್ಮ, ರಾಜೇಶ್ ಕುಮಾರ್, ಧನಲಕ್ಷ್ಮಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು