-ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಮಾಜ ಕಲ್ಯಾಣ ಇಲಾಖೆಯಲ್ಲಿ 10-12 ವರ್ಷಗಳಿಂದ ಸೇವೆಯಲ್ಲಿರುವ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರಿಗೆ ಯಾವುದೇ ನೋಟಿಸ್ ನೀಡದೆ ಕಾರ್ಮಿಕ ನಿಯಮ ಉಲ್ಲಂಘನೆ ಮಾಡಿ ಕೆಲಸದಿಂದ ವಜಾ ಮಾಡಿರುವ ಕ್ರಮ ಸರಿಯಾಗಿಲ್ಲ ಎಂದು ಖಂಡಿಸಿ, ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಕನಿಷ್ಠ ವೇತನ ಆಧಾರದ ಮೇಲೆ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಏಕಾಏಕಿ ಕೆಲಸದಿಂದ ವಜಾ ಮಾಡುವ ಕ್ರಮವನ್ನು ಪ್ರತಿಭಟನಾಕಾರರು ಖಂಡಿಸಿದರು. ಯಾವುದೇ ಕಾರ್ಮಿಕ ಕುರಿತು ಆರೋಪಗಳು ಕೇಳಿ ಬಂದರೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಜಾರಿಯಾದ ನೋಟಿಸ್ ಗೆ ಉತ್ತರ ನೀಡದಿದ್ದ ಪಕ್ಷದಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಬೇಕು. ಒಟ್ಟಾರೆ ಜಾರಿಯಾದ ಮೂರು ನೋಟಿಸ್ ಗೆ ಉತ್ತರಿಸದಿದ್ದ ಪಕ್ಷದಲ್ಲಿ ಕಲಸದಿಂದ ವಜಾ ಮಾಡಲು ಅರ್ಹರಿರುತ್ತಾರೆ ಹಾಗೂ ನೋಟಿಸ್ ಗೆ ಲಿಖಿತವಾಗಿ ಉತ್ತರಿಸಿದರೆ ವಜಾ ಮಾಡಲು ಸಾಧ್ಯವಿರುವುದಿಲ್ಲ ಎಂದು ಕಾರ್ಮಿಕ ಕಾಯ್ದೆಯು ಹೇಳುತ್ತದೆ. ಸರ್ಕಾರದ ಕಾರ್ಮಿಕ ಇಲಾಖೆ ನಿಯಮಗಳನ್ನೇ ಇಲಾಖೆಗಳು ಪಾಲಿಸದೆ ಇರುವುದು ವಿಷಾದನೀಯ ಎಂದರು.
ಬಳಿಕ ಜಿಲ್ಲಾ ಪಂಚಾಯ್ತಿ ಸಿಇಒ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮನವಿ ಪತ್ರ ಸ್ವೀಕರಿಸಿ, ಎರಡು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ವಜಾಗೊಳಿಸಲಾದ ಕಾರ್ಮಿಕರನ್ನು ಬೇರೊಂದು ವಸತಿ ನಿಯಲಕ್ಕೆ ಸೇವೆಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯಿಂದ ಹೋರಾಟವನ್ನು ಹಿಂಪಡೆಯಲಾಯಿತು.
-----
28ವೈಡಿಆರ್6: ಹಾಸ್ಟೆಲ್ ಕಾರ್ಮಿಕರನ್ನು ನಿಯಮಬಾಹಿರವಾಗಿ ಸೇವೆಯಿಂದ ವಜಾ ಕ್ರಮ ಖಂಡಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಯಾದಗಿರಿ ನಗರದ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಯಿತು.