ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಎಲ್ಲೆಡೆ ಸದ್ದು ಮಾಡುತ್ತಿರುವ ಹಕ್ಕಿಜ್ವರದಿಂದಾಗಿ ಉತ್ತರ ಕರ್ನಾಟಕದಲ್ಲಿ ಬಡವರ ನೆಚ್ಚಿನ ಆಹಾರವಾಗಿರುವ ಎಗ್‌ರೈಸ್, ಕಬಾಬ್ ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಹಕ್ಕಿಜ್ವರದ ಭೀತಿಯಿಂದಾಗಿ ಎಗ್‌ರೈಸ್ ಖರೀದಿಸುವವರ ಸಂಖ್ಯೆ ಕ್ಷೀಣಿಸಿದ್ದು, ತಯಾರಿಸಿದ ಅಡುಗೆಯಲ್ಲಿ ಶೇ. 30ರಷ್ಟು ಮಾರಾಟವಾಗುತ್ತಿಲ್ಲ.ಈ ಭಾಗದಲ್ಲಿ ಎಗ್‌ರೈಸ್- ಕಬಾಬ್ ಹೆಸರು ಕೇಳದವರೇ ಇಲ್ಲ. ಗಲ್ಲಿಗಲ್ಲಿ, ಪುಟ್‌ಪಾತ್‌ಗಳಲ್ಲಿ ಸಾಲು ಸಾಲು ಎಗ್‌ರೈಸ್- ಕಬಾಬ್ ಸೆಂಟರ್ ಇವೆ. ಹು-ಧಾ ಮಹಾನಗರವೊಂದರಲ್ಲೇ ಪುಟ್‌ಪಾತ್ ಸೇರಿದಂತೆ 500ಕ್ಕೂ ಅಧಿಕ ಎಗ್‌ರೈಸ್ ಸೆಂಟರ್‌ಗಳಿವೆ. ಈಗ ಇವೆಲ್ಲ ಖಾಲಿ ಖಾಲಿ.
ಕಡಿಮೆ ಬೆಲೆಪುಟ್ಪಾತ್, ಸಣ್ಣಪುಟ್ಟ ಡಬ್ಬಾ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ರುಚಿಯಾದ ಎಗ್‌ರೈಸ್- ಕಬಾಬ್ ದೊರೆಯುತ್ತದೆ. ಹಾಗಾಗಿ ಬಡವರು, ಮಧ್ಯಮ ವರ್ಗದವರು, ಗ್ರಾಮೀಣ ಪ್ರದೇಶದಿಂದ ಕೂಲಿಗಾಗಿ ಆಗಮಿಸಿದ ಕೂಲಿಕಾರರು, ಸಾಮಾನ್ಯ ಜನತೆ ಹೆಚ್ಚಾಗಿ ಮಧ್ಯಾಹ್ನ, ಸಂಜೆಯ ವೇಳೆ ಈ ಎಗ್‌ರೈಸ್, ಕಬಾಬ್ ಸೆಂಟರ್‌ಗಳಲ್ಲಿಯೇ ಊಟ ಮಾಡುತ್ತಾರೆ.
ಸಣ್ಣಪುಟ್ಟ ಡಬ್ಬಾ ಅಂಗಡಿಗಳಲ್ಲಿ ₹30ರಿಂದ ಹಿಡಿದು ₹120ಕ್ಕೆ ಪ್ಲೇಟ್ ಎಗ್‌ರೈಸ್ ದೊರೆಯುತ್ತದೆ. ₹50ರಿಂದ ಹಿಡಿದು ₹200- 300 ಪ್ಲೇಟ್‌ಗೆ ಕಬಾಬ್ ದೊರೆಯುತ್ತದೆ. ಬಹುತೇಕ ಡಬ್ಬಾ ಅಂಗಡಿಗಳಲ್ಲಿ ₹30ರಿಂದ ₹50ಗೆ ಪ್ಲೇಟ್ ಎಗ್‌ರೈಸ್ ದೊರೆಯುತ್ತದೆ. ಹಾಗಾಗಿ ಬಡವರು, ಮಧ್ಯಮ ವರ್ಗದವರಿಗೆ ನೆಚ್ಚಿನ ಆಹಾರವಾಗಿ ಪ್ರಸಿದ್ಧಿ ಪಡೆದಿದೆ.ಹಕ್ಕಿಜ್ವರದ ಭಯ
ಹಕ್ಕಿಜ್ವರದ ಸದ್ದು ಕೇಳಿಬರುತ್ತಿದ್ದರಿಂದಾಗಿ ಎಗ್‌ರೈಸ್ ಅಂಗಡಿಗಳಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಎಂದಿನಂತೆ ನಿತ್ಯ ತಯಾರಿಸುವ ಎಗ್‌ರೈಸ್, ಕಬಾಬ್‌ನಲ್ಲಿ ಶೇ. 30ರಷ್ಟು ಖರ್ಚಾಗುತ್ತಿಲ್ಲ. ಕಳೆದ 2-3 ದಿನಗಳಿಂದ ಇದೇ ಪರಿಸ್ಥಿತಿ ಮುಂದುವರೆದಿದೆ. ಲಾಭವಾಗುವುದಿರಲಿ, ಹಾಕಿದ ಖರ್ಚೂ ಬರುತ್ತಿಲ್ಲ ಎಂಬುದು ಅಂಗಡಿ ಮಾಲಿಕರ ಅಳಲು.ಹೊಟೇಲ್‌ಗಳಲ್ಲೂ ಇದೇ ಕಥೆಇನ್ನು ಮಾಂಸಾಹಾರಿ ಹೊಟೇಲ್‌ಗಳಲ್ಲೂ ಇದೇ ಕಥೆ. ಹೊಟೇಲ್‌ಗಳಿಗೆ ಬರುವ ಬಹುತೇಕ ಗ್ರಾಹಕರು ಚಿಕನ್ ಆರ್ಡರ್ ಮಾಡದೇ ಮಟನ್, ಮೀನಿನಿಂದ ತಯಾರಿಸಲಾದ ಆಹಾರ ಕೇಳುತ್ತಿದ್ದಾರೆ. ಹೊಟೇಲ್‌ಗಳಲ್ಲೂ ಚಿಕನ್, ಮೊಟ್ಟೆಯಿಂದ ಮಾಡಿರುವ ಅಡುಗೆಯನ್ನು ಕೇಳುವವರೇ ಇಲ್ಲದಂತಾಗಿದೆ. ಹಾಗಾಗಿ ನಿತ್ಯವೂ ಹೊಟೇಲ್‌ಗಳಲ್ಲಿ ಚಿಕನ್- ಮೊಟ್ಟೆ ಖರೀದಿಯಲ್ಲಿ ಶೇ. 50ರಷ್ಟು ಇಳಿಕೆಯಾಗಿದೆ. ಈ ಮೊದಲು ನಿತ್ಯವೂ ನಮ್ಮ ಹೊಟೇಲ್‌ಗೆ 120 ಕೆಜಿ ಚಿಕನ್, 200 ಮೊಟ್ಟೆಗಳನ್ನು ತರಿಸಿ ಅಡುಗೆ ಮಾಡಲಾಗುತ್ತಿತ್ತು. ನಿತ್ಯವೂ ಖಾಲಿಯಾಗುತ್ತಿತ್ತು. ಆದರೆ, ಕಳೆದ 3-4 ದಿನಗಳಿಂದ ಮಾಡಿದ ಅಡುಗೆಯಲ್ಲಿ ಶೇ. 30ರಷ್ಟೂ ಮಾರಾಟವಾಗುತ್ತಿಲ್ಲ. ಹಾಗಾಗಿ ಸೋಮವಾರದಿಂದ ಬರಿ 50 ಕೆಜಿ ಚಿಕನ್, 100 ಮೊಟ್ಟೆಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲೇ ಇನ್ನೂ ಉಳಿಯುತ್ತಿದೆ ಎಂದು ಹೊಟೇಲ್‌ನ ಮಾಲಿಕ ಸೈಯ್ಯದಅಲಿ ಬೆಟಗೇರಿ "ಕನ್ನಡಪ್ರಭ "ದ ಎದುರು ಅಳಲು ತೋಡಿಕೊಂಡರು. ಮಾರಾಟ ಕಮ್ಮಿ
ಹಕ್ಕಿಜ್ವರದ ಸುದ್ದಿ ಹರಡಿದಾಗಿನಿಂದ ಚಿಕನ್, ಮೊಟ್ಟೆಯಿಂದ ತಯಾರಿಸಿದ ಆಹಾರದ ಮಾರಾಟವೇ ಆಗುತ್ತಿಲ್ಲ. ನಿತ್ಯ 50 ಕೆಜಿ ಚಿಕನ್, 100 ಕುದಿಸಿದ ಮೊಟ್ಟೆ ಮಾರಾಟ ಮಾಡುತ್ತಿದ್ದೆ. ಈಗ ಅರ್ಧದಷ್ಟೂ ಮಾರಾಟವಾಗುತ್ತಿಲ್ಲ.- ಅಬ್ದುಲ್ ರಜಾಕ ನವಲೂರ, ಎಗ್‌ರೈಸ್ ಅಂಗಡಿ ಮಾಲೀಕ
ಅನ್ನ-ಸಾಂಬಾರ
ಹಲವು ವರ್ಷಗಳಿಂದ ಎಗ್‌ರೈಸ್- ಕಬಾಬ್ ತಿನ್ನುತ್ತ ಬಂದಿದ್ದೇನೆ. ಕೆಲವು ದಿನಗಳಿಂದ ಹಕ್ಕಿಜ್ವರದ ಸುದ್ದಿ ಹರಡಿದೆ. ಈಗ ಎಗ್‌ರೈಸ್- ಕಬಾಬ್ ತಿನ್ನಲು ಭಯವಾಗುತ್ತಿದೆ. ಮಧ್ಯಾಹ್ನದ ವೇಳೆ ಅನ್ನ-ಸಾಂಬಾರ ತಿನ್ನುತ್ತಿದ್ದೇನೆ.- ಸತೀಶ ಬಿಜಕಲ್ಲ, ಗ್ರಾಹಕ