ಸಾಲಬಾಧೆಗೆ ಬೇಸತ್ತು ಕಾಳಿ ನದಿಗೆ ಹಾರಿದ ಹೋಟೆಲ್ ಉದ್ಯಮಿ

KannadaprabhaNewsNetwork |  
Published : Jun 20, 2026, 02:30 AM IST
ಕಾಳಿ ನದಿ | Kannada Prabha

ಸಾರಾಂಶ

ವ್ಯವಹಾರದಲ್ಲಿ ಉಂಟಾದ ತೀವ್ರ ಆರ್ಥಿಕ ನಷ್ಟ ಹಾಗೂ ಸಾಲಬಾಧೆಯಿಂದ ಕಂಗೆಟ್ಟಿದ್ದ ಹೋಟೆಲ್ ಉದ್ಯಮಿಯೊಬ್ಬರು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಅವರ ಮೃತದೇಹ ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯ ಹಿನ್ನೀರಿನಲ್ಲಿ ಗುರುವಾರ ಪತ್ತೆಯಾಗಿದೆ.

ಕಾರವಾರ: ವ್ಯವಹಾರದಲ್ಲಿ ಉಂಟಾದ ತೀವ್ರ ಆರ್ಥಿಕ ನಷ್ಟ ಹಾಗೂ ಸಾಲಬಾಧೆಯಿಂದ ಕಂಗೆಟ್ಟಿದ್ದ ಹೋಟೆಲ್ ಉದ್ಯಮಿಯೊಬ್ಬರು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಅವರ ಮೃತದೇಹ ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯ ಹಿನ್ನೀರಿನಲ್ಲಿ ಗುರುವಾರ ಪತ್ತೆಯಾಗಿದೆ.ಕಾರವಾರದ ಜಿಪಂ ಕಚೇರಿ ಸಮೀಪದ ಗೋಲ್ಡನ್ ಆರ್ಕೇಡ್ ಅಪಾರ್ಟ್‌ಮೆಂಟ್ ನಿವಾಸಿ ಸತೀಶ್ ಲಕ್ಷ್ಮಣ ಮ್ಹಾಳಸೇಕರ್ (56) ಮೃತಪಟ್ಟ ಉದ್ಯಮಿ.ಜೂ. 17ರಂದು ಬೆಳಗ್ಗೆ 6.30ರ ಸುಮಾರಿಗೆ ಮನೆಯಿಂದ ತಮ್ಮ ಕಾರಿನಲ್ಲಿ ಹೊರಟಿದ್ದ ಸತೀಶ್ ಅವರು, ಹಣಕೋಣದ ''ರಿವರ್ ಎಡ್ಜ್ ರೆಸಾರ್ಟ್'' ಬಳಿ ತೆರಳಿದ್ದರು. ಅಲ್ಲಿಂದ ಕಯಾಕ್ ಬೋಟ್ ಏರಿ ಕಾಳಿ ನದಿಯ ಹಿನ್ನೀರಿನತ್ತ ಸಾಗಿದ್ದರು. ತಡರಾತ್ರಿಯಾದರೂ ಅವರು ಮನೆಗೆ ಮರಳದ ಕಾರಣ ಹಾಗೂ ಮೊಬೈಲ್ ಸಂಪರ್ಕಕ್ಕೂ ಸಿಗದ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.ನಾಪತ್ತೆಯಾಗಿದ್ದ ಉದ್ಯಮಿಗಾಗಿ ಪೊಲೀಸರು ಹಾಗೂ ಸ್ಥಳೀಯರು ನದಿ ಪಾತ್ರದಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಜೂ. 18ರಂದು ಬೆಳಗ್ಗೆ 9.30ರ ಸುಮಾರಿಗೆ ಹಣಕೋಣದ ಕಾಳಿ ನದಿಯ ಹಿನ್ನೀರಿನಲ್ಲಿ ಸತೀಶ್ ಅವರ ಮೃತದೇಹ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸತೀಶ್ ಅವರು ಕಾರವಾರದಲ್ಲಿ ಗುತ್ತಿಗೆ ಆಧಾರದ ಮೇಲೆ ಹಲವು ಹೋಟೆಲ್‌ಗಳನ್ನು ಪಡೆದು ವ್ಯವಹಾರ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಹೋಟೆಲ್ ಉದ್ಯಮದಲ್ಲಿ ಭಾರಿ ನಷ್ಟ ಉಂಟಾಗಿತ್ತು. ಈ ನಷ್ಟವನ್ನು ಸರಿದೂಗಿಸಲು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದಲ್ಲದೆ, ಮನೆಯಲ್ಲಿದ್ದ ಚಿನ್ನಾಭರಣಗಳನ್ನೂ ಅಡವಿಟ್ಟಿದ್ದರು. ದಿನೇ ದಿನೇ ಸಾಲದ ಹೊರೆ ವಿಪರೀತವಾಗಿದ್ದರಿಂದ ಅವರು ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ನನ್ನ ಪತಿಯ ಸಾವಿನಲ್ಲಿ ಬೇರೆ ಯಾವುದೇ ಅನುಮಾನಗಳಿಲ್ಲ ಎಂದು ಮೃತರ ಪತ್ನಿ ಮಾರ್ಸಲಿನಾ ಫರ್ನಾಂಡೀಸ್ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ತಾಕುಲ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ, ಬೀಜಗಳ ಕೃತಕ ಅಭಾವ ಉಂಟು ಮಾಡಬೇಡಿ: ಕೃಷಿ ಸಹಾಯಕ ನಿರ್ದೇಶಕ ಎಚ್ಚರಿಕೆ
ವಿದ್ಯುತ್ ಖಾಸಗೀಕರಣಕ್ಕೆ ಹಳಿಯಾಳದಲ್ಲಿ ರೈತರ ವಿರೋಧ