ಹಳಿಯಾಳ: ಬೆಸ್ಕಾಂ, ಹೆಸ್ಕಾಂ, ಸೆಸ್ಕಾಂ, ಜೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ 19 ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಕೋರಿ ಟಾಟಾ ಪವರ್ ಕಂಪನಿ ಸಲ್ಲಿಸಿದ ಅರ್ಜಿಗೆ ನಮ್ಮ ಆಕ್ಷೇಪಣೆಯಿದ್ದು, ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ತಿರಸ್ಕರಿಸಬೇಕೆಂದು ಹಳಿಯಾಳ ತಾಲೂಕಿನ ಕಬ್ಬು ಬೆಳೆಗಾರರು ಹಾಗೂ ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿದ್ಯುತ್ ಖಾಸಗೀಕರಣ ವಿರೋಧಿಸಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ಹಾಗೂ ರೈತರು ತಾಲೂಕಾಡಳಿತ ಸೌಧಕ್ಕೆ ತೆರಳಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಈ ವೇಳೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಸರ್ಕಾರದ ಬಂಡವಾಳಶಾಹಿ ಧೋರಣೆ ಟೀಕಿಸಿದರು.ಈ ವೇಳೆ ಮಾತನಾಡಿದ ರೈತ ಮುಖಂಡರಾದ ನಾಗೇಂದ್ರ ಜಿವೋಜಿ, ಶಂಕರ ಕಾಜಗಾರ ಹಾಗೂ ಸುರೇಶ ಶಿವಣ್ಣನವರ, ವಿದ್ಯುತ್ ಖಾಸಗೀಕರಣದಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಅನಾನುಕೂಲತೆಗಳಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯ ನಂತರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ರವೀಂದ್ರ ನೇಸರಗಿ ಅವರಿಗೆ ಸಲ್ಲಿಸಿದರು. ಸರ್ಕಾರ ವಿದ್ಯುತ್ ವಿತರಣಾ ಕಂಪನಿಗಳನ್ನು ಬಲಿಷ್ಠಗೊಳಿಸುವ ಬದಲು ಅದನ್ನು ಖಾಸಗಿ ಉದ್ದಿಮೆಗಳಿಗೆ ನೀಡಿ ಮುಚ್ಚುವ ಪ್ರಯತ್ನ ನಡೆಸಿದೆ. ಖಾಸಗಿ ಕಂಪನಿಗಳು ಲಾಭದಾಯಕವಾದ ಮೂಲಗಳಿಗೆ ಮೊದಲ ಆದ್ಯತೆ ನೀಡುತ್ತವೆ ಹೊರತು ಬಡಜನರ, ಕೃಷಿಕರ ಹಾಗೂ ಸರ್ಕಾರದ ಕಲ್ಯಾಣಕಾರಿ ಯೋಜನೆಗಳ ಪರವಾಗಿ ಇರುವುದಿಲ್ಲ. ಆದಕಾರಣ ರಾಜ್ಯ ಸರ್ಕಾರ ಗ್ರಾಹಕರ ಕಲ್ಯಾಣ ಮತ್ತು ಸಾರ್ವಜನಿಕ ಸೇವಾ ತತ್ವಗಳ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಯವರು ಸಮಾನಾಂತರ ವಿದ್ಯುತ್ ವಿತರಣೆಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿದ್ದಾರೆ.ಪ್ರತಿಭಟನೆ ನೇತೃತ್ವವನ್ನು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಹಾಗೂ ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ವಹಿಸಿದ್ದರು. ಪ್ರಮುಖರಾದ ರಾಮದಾಸ ಬೆಳಗಾಂವಕರ, ಬಳಿರಾಮ ಮೊರೆ, ಬೆಡದೊಳಕರ, ಜೀಜಾಮಾತಾ ಮರಾಠ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಭಾರತಿ ಬಿರ್ಜೆ ಹಾಗೂ ಇತರರು ಇದ್ದರು. ಪ್ರತಿಭಟನೆ ಬೆಂಬಲಿಸಿ ಹಿರಿಯ ನಾಗರಿಕ ವೇದಿಕೆ, ನಿವೃತ್ತ ಸರ್ಕಾರಿ ನೌಕರರ ಸಂಘ, ಮರಾಠ ಮಹಿಳಾ ಸಂಘದವರು ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು.