ಹಾವೇರಿ: ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ಹಾರಿ ಬುಧವಾರ ಇಡೀ ರಾತ್ರಿ ನದಿಯಲ್ಲಿನ ಗಿಡಗಂಟಿ ಹಿಡಿದು ಜೀವ ಉಳಿಸಿಕೊಂಡಿದ್ದ ಮಹಿಳೆಯನ್ನು ಗುರುವಾರ ರಕ್ಷಣೆ ಮಾಡಿದ ಘಟನೆ ರಾಣಿಬೆನ್ನೂರು ತಾಲೂಕಿನ ಕೋಟಿಹಾಳ- ನಿಟಪಳ್ಳಿ ಗ್ರಾಮದ ಬಳಿ ನಡೆದಿದೆ.
ಹರಿಹರ ತಾಲೂಕಿನ ನಂದಿಗುಡಿ ಸೇತುವೆಯಿಂದ ಬುಧವಾರ ರಾತ್ರಿ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ, ಈಜು ಬರುತ್ತಿದ್ದ ಕಾರಣ ಸುಮಾರು ಕಿಲೋ ಮೀಟರ್‌ವರೆಗೆ ಈಜುತ್ತ ಬಂದು ಕೋಟಿಹಾಳ- ನಿಟಪಳ್ಳಿ ಗ್ರಾಮದ ಬಳಿ ನದಿ ಮಧ್ಯೆ ದೊರೆತ ಗಿಡ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾಳೆ.ನಸುಕಿನ ಜಾವ ಮಹಿಳೆಯ ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ತೆರಳಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ರೂಪಾ, ಅಗರಬತ್ತಿ ಫ್ಯಾಕ್ಟರಿ ಮಾಡುವ ಸಲುವಾಗಿ ₹22 ಲಕ್ಷ ಸಾಲ ಮಾಡಿಕೊಂಡಿದ್ದೆ. ಅದು ಈಗ ₹2 ಕೋಟಿ ಆಗಿದೆ. ಅಲ್ಲದೆ ಸಾಲಗಾರರ ಕಾಟದಿಂದ ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಹೇಳಿಕೊಂಡಳು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಾಲದ ಹಣಕ್ಕಾಗಿ ತೊಂದರೆ ನೀಡಿದವರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.ಸಾಲಕ್ಕಾಗಿ ಪೀಡಿಸುತ್ತಿದ್ದ ಆರೋಪದಲ್ಲಿ ರಟ್ಟೀಹಳ್ಳಿ ಕುಂಚೂರು ಗ್ರಾಮದ ಚನ್ನಬಸಪ್ಪ ಕಿಟ್ಟದ್, ರಮೇಶ ಹೊಸಮನಿ, ಜಟ್ಟೆಪ್ಪ ಮಾಳಗೊಂಡರ, ರಮೇಶ ತೋಟಗಂಟಿ, ಸರೋಜಾ ಹುರಕಡ್ಲಿ ಎಂಬವರ ಮೇಲೆ ಕೇಸ್ ದಾಖಲಿಸಲಾಗಿದೆ.