ಕನ್ನಡಪ್ರಭ ವಾರ್ತೆ ಕನಕಪುರ
ಮನೆಯಲ್ಲೇ ಪೌಷ್ಟಿಕ ಯುಕ್ತ ಆಹಾರ ಪದಾರ್ಥಗಳಿದ್ದು, ಗೃಹಿಣಿಯರು ಅವುಗಳ ಬಗ್ಗೆ ತಿಳಿದು ಬಳಕೆ ಮಾಡಿದರೆ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಪ್ರಧಾನ ಸಿವಿಲ್ ಮತ್ತು ಜೆಎಂ ಎಫ್ ನ್ಯಾಯಾಧೀಶರಾದ ರಾಧಾ ತಿಳಿಸಿದರು.ತಾಲೂಕು ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ, ಶಿಶು ಅಭಿವೃದ್ಧಿ ಯೋಜನೆಯಿಂದ ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಬದಲಾದ ಜೀವನ ಶೈಲಿಯಿಂದ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹಣಕ್ಕಿಂತಲೂ ಆರೋಗ್ಯ ಬಹಳ ಮುಖ್ಯ. ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಬೇಕು ಎಂದರು.
ನುಗ್ಗೆ ಸೊಪ್ಪಿನಲ್ಲಿ ಹೇರಳವಾದ ಪೌಷ್ಟಿಕಾಂಶಗಳಿದ್ದು ದಿನನಿತ್ಯದ ಆಹಾರದಲ್ಲಿ ಸೊಪ್ಪು, ತರಕಾರಿಗಳಂತಹ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಅಪೌಷ್ಟಿಕತೆಯನ್ನು ತಡೆಗಟ್ಟಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದಾಗಿದೆ, ಪ್ರತಿ ಕುಟುಂಬದ ಮನೆಯಲ್ಲಿ ಯಾರಿಗೆ ಯಾವ ಅನಾರೋಗ್ಯ ಸಮಸ್ಯೆ ಇದೆ, ಯಾರಿಗೆ ಏನು ಕೊಡಬೇಕು ಎಂದು ತಿಳಿದುಕೊಂಡಾಗ ಎಲ್ಲಾ ಕಾಯಿಲೆಗಳಿಗೂ ಮನೆ ಮದ್ದುಗಳಿಂದ ಗುಣಪಡಿಸಬಹುದು, ಇಂದಿನ ಕಾಲದಲ್ಲಿ ಕುಟುಂಬದ ಹಿರಿಯರು ಮನೆಯ ಹಿಂದೆ ಹಿತ್ತಲುಗಳನ್ನು ಮಾಡಿಕೊಂಡು ಅದರಲ್ಲಿ ಹೇರಳವಾಗಿ ಸೊಪ್ಪು, ತರಕಾರಿ ಬೆಳೆಯುತ್ತಿದ್ದರು. ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮನೆಯ ಮದ್ದಿನಿಂದಲೇ ಗುಣಪಡಿಸುತ್ತಿದ್ದರು, ಬದಲಾದ ಪರಿಸ್ಥಿತಿಯಲ್ಲಿ ಆಧುನಿಕ ಜೀವನಶೈಲಿಗೆ ಮೋಹಗೊಂಡು ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಮಾತನಾಡಿ, ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರ ಮತ್ತು ಇಲಾಖೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಮ ಮಟ್ಟ, ಪಂಚಾಯಿತಿ ಮಟ್ಟ, ಹೋಬಳಿ ಮಟ್ಟ, ತಾಲೂಕು ಮಟ್ಟದಲ್ಲಿ ಪೌಷ್ಟಿಕತೆಯ ಜಾಗೃತಿಗಾಗಿ ಪೋಷನ್ ಅಭಿಯಾನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು,
ಕಾರ್ಯಕ್ರಮದಲ್ಲಿ ಸರ್ಕಾರದಿಂದ ಗರ್ಭಿಣಿ ಮತ್ತು ಶಿಶುಗಳಿಗೆ ಸಿಗುವ ಪೂರಕ ಪೌಷ್ಟಿಕ ಆಹಾರ ಮತ್ತು ಪ್ರಕೃತಿ ದತ್ತವಾಗಿ ಸಿಗುವ ಸೊಪ್ಪು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರಗಳ ಪ್ರದರ್ಶನ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆಯಿತು. ಇಬ್ಬರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು,ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಲಕ್ಷ್ಮೀದೇವಿ, ತಾಪಂ ಎ. ಡಿ. ಮೋಹನ್ ಬಾಬು, ಸರ್ಕಾರಿ ಅಭಿಯೋಜಕಿ ರೂಪ, ನಮ್ಮ ಕ್ಲಿನಿಕ್ ಡಾ.ಧವಂತ್ ಸತೀಶ್, ವಕೀಲರ ಸಂಘದ ಅಧ್ಯಕ್ಷ ಚನ್ನೇಗೌಡ, ವಕೀಲ ಗೋಪಾಲ್ ಗೌಡ, ಕಾಮೇಶ್ ಎಸ್ಟಿ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ದಿವ್ಯಶ್ರೀ, ಸರಿತಾ ನಾಯಕ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.