ಮಾಜಿ ಸೈನಿಕರಿಗೆ ಬಡಾವಣೆ: ಸಚಿವ ಬೈರೇಗೌಡ

KannadaprabhaNewsNetwork |  
Published : Mar 10, 2026, 02:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ರಾಜ್ಯದ ಮಾಜಿ ಸೈನಿಕರಿಗೆ ಉಚಿತ ನೀವೇಶನ ನೀಡುವ ಸಂಬಂಧ ರಾಜ್ಯ ಸರ್ಕಾರವೇ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

- ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ । 3 ವರ್ಷದಲ್ಲಿ 338 ಜನರಿಂದ ಅರ್ಜಿ ಸಲ್ಲಿಕೆ

- ಕಾಡುಪ್ರಾಣಿ ಓಡಾಡೋ ಸ್ಥಳ: ಹರೀಶ್‌ ಆಕ್ಷೇಪ । ವಾಸಯೋಗ್ಯತೆ ಪರಿಶೀಲಿಸಿ ಕ್ರಮ: ಭರವಸೆ

- - -

ಕನ್ನಡಪ್ರಭ ವಾರ್ತೆ ವಿಧಾನಸಭೆರಾಜ್ಯದ ಮಾಜಿ ಸೈನಿಕರಿಗೆ ಉಚಿತ ನೀವೇಶನ ನೀಡುವ ಸಂಬಂಧ ರಾಜ್ಯ ಸರ್ಕಾರವೇ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸೋಮವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಪಿ.ಹರೀಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾಜಿ ಸೈನಿಕರಿಗೆ ನಿವೇಶನ ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿದೆ. ನಿವೇಶನ ನೀಡಲು ಜಮೀನು ಬೇಕು. ಈಗ ಜಮೀನು ಗುರುತಿಸುವ ಕೆಲಸವಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಆನ್‌ಲೈನ್‌ ವ್ಯವಸ್ಥೆ ತಂದಿದ್ದೇವೆ. ರಾಜ್ಯದ ಹಲವು ಕಡೆ ಅರ್ಜಿಗಳು ಬಾಕಿ ಇದ್ದು, ಸರ್ಕಾರದಿಂದಲೇ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ನಿವೇಶನ ಕೋರಿ 338 ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದ ಸಚಿವರು, ‘ಅವುಗಳನ್ನು ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸುತ್ತಿದೆ. ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ನೀವೇಶನ ಒದಗಿಸಲು 13.30 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡಾವಣೆ ಮಾಡಿದರೆ ಸುಮಾರು 350 ನಿವೇಶನಗಳು ಆಗಲಿವೆ. ಈ ವರ್ಷವೇ ಅದನ್ನು ನಿರ್ಮಿಸಿ ಅರ್ಹರಿಗೆ ನೀಡಲಾಗುವುದು’ ಎಂದು ಹೇಳಿದರು.

ಚಿರತೆ, ಕರಡಿ ಓಡಾಟದ ಜಾಗ:

ಕೃಷ್ಣ ಬೈರೇಗೌಡರ ಹೇಳಿಕೆಗೆ ಶಾಸಕ ಬಿ.ಪಿ.ಹರೀಶ್‌ ಅವರು ಆಕ್ಷೇಪಿಸಿದ್ದು, ‘ಸರ್ಕಾರ ಗುರುತಿಸಿರುವ ಜಾಗವು ಗ್ರಾಮೀಣ ಪ್ರದೇಶದ ಗುಡ್ಡಗಾಡು. ಇಲ್ಲಿ ಚಿರತೆ, ಕರಡಿ ಓಡಾಟವಿದೆ. ಈ ಜಾಗದಲ್ಲಿ ನಿವೇಶನ ಕೊಟ್ಟರೆ ಮಾಜಿ ಸೈನಿಕರು ಮನೆ ನಿರ್ಮಿಸಿಕೊಂಡು ವಾಸಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು, ‘ದೇಶ ಸೇವೆ ಮಾಡಿದ ಮಾಜಿ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಭೂಸ್ವಾಧೀನ ಮಾಡಿ ನಿವೇಶನ ನೀಡಬೇಕು ’ಎಂದು ಆಗ್ರಹಿಸಿದರು.ವಾಸಯೋಗ್ಯದ ಬಗ್ಗೆ ಪರಿಶೀಲಿಸಿ ಕ್ರಮ:ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ‘ನಗರಪ್ರದೇಶಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಇಲ್ಲಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾದರೆ ಜನ ತಿರುಗಿಬೀಳುತ್ತಾರೆ. ಈಗ ಗುರುತಿಸಿರುವ ಜಮೀನು ಬಡಾವಣೆ ನಿರ್ಮಾಣಕ್ಕೆ ಯೋಗ್ಯವೇ ಎಂದು ಪರಿಶೀಲಿಸಲು ಸೂಚಿಸುತ್ತೇನೆ. ವಾಸಕ್ಕೆ ಯೋಗ್ಯವಿಲ್ಲ ಎಂದರೆ, ಬೇರೆ ಕಡೆ ವಾಸಯೋಗ್ಯ ಜಾಗ ಗುರುತಿಸಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರು ಇತಿಹಾಸದ ಮೂಲ ಜಾನಪದ
ಮಕ್ಕಳು ಆಡುವ ಉದ್ಯಾನವನಗಳಲ್ಲಿ ಅದ್ವಾನ