ವಿಶೇಷ ಉಪನ್ಯಾಸ
ಹೊಯ್ಸಳರು ಕನ್ನಡ ಸಾಹಿತ್ಯ, ಸಂಸ್ಕ್ರತಿ ಮತ್ತು ಶಿಲ್ಪಕಲೆಗಳ ಅಭಿವೃದ್ದಿಗೆ ನೀಡಿದ ಪ್ರೋತ್ಸಾಹ ಅನನ್ಯವಾಗಿದ್ದು ಹೊಯ್ಸಳರ ಕಾಲದಲ್ಲಿ ತಾಲೂಕಿಗೆ ತಮ್ಮದೇ ಆದ ವಾಸ್ತುಶಿಲ್ಪ, ಕಲೆಗಳಿಗೆ ಕೊಡುಗೆ ನೀಡಿ ಉತ್ತಮ ಆಡಳಿತ ನೀಡಿರುವುದನ್ನು ಸ್ಮರಿಸಿಕೊಳ್ಳಬೇಕು ಎಂದು ಹೊಯ್ಸಳ ವಾಸ್ತುಶಿಲ್ಪ ತಜ್ಞ ಶಶಿಧರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ ತಾಲೂಕಿನ ಹೊಯ್ಸಳ ದೇವಾಲಯಗಳ ವಾಸ್ತುಶಿಲ್ಪ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರ್ನಾಟಕದ ಸಾಂಸ್ಕ್ರತಿಕ ಶ್ರೀಮಂತಿಕೆ ಹೆಚ್ಚಿಸಿದ ರಾಜಮನೆತನಗಳಲ್ಲಿ ಹೊಯ್ಸಳರದು ಪ್ರಮುಖ ಮನೆತನವಾಗಿದ್ದು ದೇವಾಲಯಗಳ ವಾಸ್ತುಶಿಲ್ಪ ಕೆತ್ತನೆಗಳು ಸೂಕ್ಷ್ಮವಾಗಿದ್ದು ಆಕರ್ಷಕವಾಗಿದ್ದವು. ಉದಾಹರಣೆಗೆ ತಾಲೂಕಿನಲ್ಲಿ ಅರಸೀಕೆರೆಯ ಶಿವಾಲಯ, ಹಾರನಹಳ್ಳಿ ಚೆನ್ನಕೇಶವ, ಹುಲ್ಲೇಕೆರೆ, ಮುರುಂಡಿ, ಜಾವಗಲ್, ಅರಕೆರೆ ಕೊಳಗುಂದ ಹೀಗೆ ಮುಂತಾದ ಹೊಯ್ಸಳ ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ರಾಜೇಶ್ ಖನ್ನಾ ಮಾತನಾಡಿ, ವಿದ್ಯಾರ್ಥಿಗಳು ಜಿಲ್ಲೆ, ತಾಲೂಕುಗಳಲ್ಲಿ ಹೊಯ್ಸಳರ ಕಾಲದ ದೇವಾಲಯಗಳ ವೀಕ್ಷಣೆ ಕೈಗೊಂಡು ಅವರ ಕಾರ್ಯವೈಖರಿ, ಶಿಸ್ತುಬದ್ಧ ಕೆಲಸಗಳನ್ನು ಗಮನಿಸಬೇಕು. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು.