ಮಾದರಿ ನೀತಿ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು: ಡಿಸಿ ಮೀನಾ ನಾಗರಾಜ್

KannadaprabhaNewsNetwork | Published : Mar 23, 2024 1:11 AM

ಸಾರಾಂಶ

ಲೋಕಸಭಾ ಚುನಾವಣೆಯನ್ನು ಮುಕ್ತ ನ್ಯಾಯ ಸಮ್ಮತ ಮತ್ತು ಶಾಂತಿ ಸುವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ನಡೆಯಲು ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಪಾಲಿಸುವ ಮೂಲಕ ತಮ್ಮ ಕರ್ತವ್ಯ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದರು.

ಮಾದರಿ ನೀತಿ ಸಂಹಿತೆ ಸಂಬಂಧಿಸಿದ ಅನುಷ್ಠಾನಾಧಿಕಾರಿಗಳ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಲೋಕಸಭಾ ಚುನಾವಣೆಯನ್ನು ಮುಕ್ತ ನ್ಯಾಯ ಸಮ್ಮತ ಮತ್ತು ಶಾಂತಿ ಸುವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ನಡೆಯಲು ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಪಾಲಿಸುವ ಮೂಲಕ ತಮ್ಮ ಕರ್ತವ್ಯ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾದರಿ ನೀತಿ ಸಂಹಿತೆ ಸಂಬಂಧಿಸಿದ ಅನುಷ್ಠಾನಾಧಿ ಕಾರಿಗಳ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಚೆಕ್ ಪೋಸ್ಟ್‌ ಗಳನ್ನು ತೆರೆದು ಸಿಸಿ ಕ್ಯಾಮರ, ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ ಎಂದ ಅವರು, ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದ್ದು, ಇಲ್ಲಿ ನಡೆಯುವ ಎಲ್ಲಾ ಮಾಹಿತಿ ಸಂಗ್ರಹಿಸಲು ನೋಡಲ್ ಅಧಿಕಾರಿಗಳ ಜಾಗೃತಿ ತಂಡ ಕೂಡ ಕೆಲಸ ನಿರ್ವಹಿಸಲಿದೆ. ಸರಕು ವಾಹನಗಳು ಸೇರಿದಂತೆ ಜಿಲ್ಲೆಯಲ್ಲಿ ಅಬಕಾರಿ ತನಿಖಾ ತಂಡಗಳು ಕೂಡ ರಚಿಸಲಾಗಿದೆ ಎಂದರು. ಆದಾಯ ತೆರಿಗೆ, ಐಟಿ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲ ಬ್ಯಾಂಕ್‌ ವಹಿವಾಟು ನಡೆಯುವ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಮತ್ತು ಹೆಚ್ಚು ಹಣ ವಹಿವಾಟು ನಡೆಸುವ ಅಕೌಂಟ್‌ಗಳ ಬಗ್ಗೆ ನಿಗಾ ಇಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳ ತಂಡ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.ಭದ್ರಾ, ವೈಲ್ಡ್ ಲೈಫ್, ಆನೆ ಕಾರಿಡಾರ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮತಗಟ್ಟೆ ಗಳಲ್ಲಿ ಮತದಾನದ ದಿನದಂದು ಯಾವುದೇ ಕಾಡು ಪ್ರಾಣಿಗಳಿಂದ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಅಲ್ಲಿ ವಾಸಿಸುವ ಪ್ರದೇಶದ ಜನರಿಗೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಪ್ರಾಣಿಗಳಿಂದ ಹೆಚ್ಚು ಅಪಾಯವಿರುವ ಸ್ಥಳಗಳನ್ನು ಗುರುತಿಸಿ ಈಗಿಂದಲೇ ಅದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

22 ಕೆಸಿಕೆಎಂ 1ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಿಸಿ ಮೀನಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳ ಸಮನ್ವಯ ಸಮಿತಿ ಸಭೆ ನಡೆಯಿತು. ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.

Share this article