ಅಧ್ಯಾಪಕ ವೃತ್ತಿ ಜೊತೆಗೆ ಕನ್ನಡಜ್ಯೋತಿ ಬೆಳಗಿಸಿದ ಎಚ್‌ಎಸ್‌ವಿ

KannadaprabhaNewsNetwork |  
Published : May 31, 2025, 01:11 AM IST
(ಎಚ್‌.ಎಸ್‌. ವೆಂಕಟೇಶ ಮೂರ್ತಿ) | Kannada Prabha

ಸಾರಾಂಶ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂಬ ಕವಿತೆಯನ್ನು ಬರೆಯುವ ಮೂಲಕ ಬದುಕಿನ ಬಗ್ಗೆ ಪ್ರೀತಿ ಬಿತ್ತಿದ್ದ ಎಚ್‌ಎಸ್‌ವಿ ಅಂತಲೇ ಪ್ರಸಿದ್ಧರಾದ ಎಚ್.ಎಚ್. ವೆಂಕಟೇಶಮೂರ್ತಿ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಅಗಲಿದ ಸುದ್ದಿಯಿಂದ ಹುಟ್ಚೂರಿನಲ್ಲಿ ಸೂತಕದ ಛಾಯೆ ಆವರಿಸಿದೆ.

- ವೆಂಕಟೇಶಮೂರ್ತಿ ಅಗಲಿಕೆ: ಹುಟ್ಟೂರು ಚನ್ನಗಿರಿ ತಾಲೂಕು ಹೊದಿಗೆರೆಯಲ್ಲಿ ನೀರವ ಮೌನ

- ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಅಂತಾ ಸಾರಿದ್ದ ಹಿರಿಯ ಕವಿ ಎಚ್ಎಸ್‌ವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂಬ ಕವಿತೆಯನ್ನು ಬರೆಯುವ ಮೂಲಕ ಬದುಕಿನ ಬಗ್ಗೆ ಪ್ರೀತಿ ಬಿತ್ತಿದ್ದ ಎಚ್‌ಎಸ್‌ವಿ ಅಂತಲೇ ಪ್ರಸಿದ್ಧರಾದ ಎಚ್.ಎಚ್. ವೆಂಕಟೇಶಮೂರ್ತಿ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಅಗಲಿದ ಸುದ್ದಿಯಿಂದ ಹುಟ್ಚೂರಿನಲ್ಲಿ ಸೂತಕದ ಛಾಯೆ ಆವರಿಸಿದೆ.

ಅವಿಭಜಿತ ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದ, ಹಾಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ 23.6.1944ರಲ್ಲಿ ಜನಿಸಿದ್ದ ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹಾನ್ ಕವಿಯಾಗಿದ್ದಾರೆ. ಅವರನ್ನು ನೆನೆದು ಗ್ರಾಮಸ್ಥರು ಎಚ್ಎಸ್‌ವಿ ಕುಟುಂಬ, ಎಚ್‌ಎಸ್‌ವಿ ಅವರೊಂದಿಗಿನ ಒಡನಾಟವನ್ನು ಈ ಸಂದರ್ಭದಲ್ಲಿ ಮೆಲಕು ಹಾಕುತ್ತಿದ್ದಾರೆ.

ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ನಾರಾಯಣ ಭಟ್ಟರು, ಶಿಕ್ಷಕಿ ನಾಗರತ್ನಮ್ಮ ದಂಪತಿ ಮಗನಾಗಿ ಜನಿಸಿದ ಶ್ರೀನಿವಾಸ ಎಂಬ ಬಾಲ್ಯ ಹೆಸರಿನ ಎಚ್.ಎಸ್. ವೆಂಕಟೇಶಮೂರ್ತಿ ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಹೀಗೆ ಕನ್ನಡ ಸಾಹಿತ್ಯಲೋಕಕ್ಕೆ ಹಲವಾರು ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.

ಶಿಕ್ಷಣದ ಹಾದಿ:

ಹುಟ್ಟೂರು ಹೊದಿಗೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ವೆಂಕಟೇಶಮೂರ್ತಿ ಅವರು ಹೊಳಲ್ಕೆರೆ, ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಅನಂತರ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಕನ್ನಡದಲ್ಲಿ ಕಥನ ಕವನಗಳು ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ, ಪಿಎಚ್‌.ಡಿ ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 3 ದಶಕಕ್ಕೂ ಹೆಚ್ಚು ಕಾಲ ಅದೇ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದವರು ಎಚ್ಎಸ್‌ವಿ.

ತಾಯಿ-ತವರು ಮನೆ ಪ್ರಭಾವ:

85ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಶಿಕ್ಷಕಿಯೂ ಆದ ತಾಯಿ ನಾಗರತ್ನಮ್ಮ ಮತ್ತು ಅವರ ತವರು ಮನೆಯ ಪ್ರಭಾವವೇ ಸಾಹಿತ್ಯದ ಕಡೆಗೆ ಒಲವು ಬೆಳೆಯುವಂತೆ ಮಾಡಿತ್ತು. ಕನ್ನಡ ಅಧ್ಯಾಪಕರಾಗಿದ್ದ ನರಸಿಂಹ ಶಾಸ್ತ್ರಿಗಳು ಸಹ ವೆಂಕಟೇಶ ಮೂರ್ತಿಯವರನ್ನು ಪ್ರೋತ್ಸಾಹಿಸಿದ ಪ್ರಮುಖರು. ತಮ್ಮ ಬಳಿ ಇದ್ದ ಕುವೆಂಪು, ದ.ರಾ.ಬೇಂದ್ರೆ, ಗೊರೂರು, ಮಾಸ್ತಿ, ಕಾರಂತ ಸೇರಿದಂತೆ ಅನೇಕ ಹಿರಿಯರ ಕೃತಿಗಳನ್ನು ವೆಂಕಟೇಶಮೂರ್ತಿ ಅವರಿಗೆ ಪರಿಚಯಿಸಿದ್ದರು.

ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಪುಟ್ಟ ಹಳ್ಳಿಯಿಂದ ಹೊಸಲೋಕಕ್ಕೆ, ಕನ್ನಡ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿದ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ವೆಂಕಟೇಶಮೂರ್ತಿ ಅವರು ತಮ್ಮ ಮೊದಲ ಕವನ ಸಂಕಲನ ಪರಿವೃತ್ತವನ್ನು ತಮ್ಮ ಗುರುಗಳಾದ ನರಸಿಂಹ ಶಾಸ್ತ್ರಿ ಅವರಿಗೆ ಅರ್ಪಿಸಿದ್ದರು. ಕೋಟೆ, ಬೆಟ್ಟ, ಪರಿಸರ, ಪೇಟೆಗಳಲ್ಲಿನ ಅಲೆದಾಟವು ಪ್ರಕೃತಿಯ ಸೊಬಗಿನಲ್ಲಿ ತೊಡಗುವಂತೆ, ಅದಕ್ಕೆ ಅಕ್ಷರರೂಪ ನೀಡುವಂತೆ ಸಾಹಿತ್ಯವು ವೆಂಕಟೇಶ ಮೂರ್ತಿ ಅವರನ್ನು ಅಪ್ಪಿತು.

ಹೊದಿಗೆರೆ ಗ್ರಾಮವು ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಜಿ ಮಹಾರಾಜರ ಸಮಾಧಿ ಇರುವ ಊರು ಎಂಬುದಕ್ಕೆ ಹೆಸರಾಗಿದೆ. ಈ ಪ್ರಸಿದ್ಧಿ ಜೊತೆಗೆ ಹಿರಿಯ ಕವಿ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಹುಟ್ಟೂರು ಹೊದಿಗೆರೆ ಎಂದೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಹೊದಿಗೆರೆ ಗ್ರಾಮದ ಪರಿಸರವೇ ವೆಂಕಟೇಶ ಮೂರ್ತಿ ಅವರ ವ್ಯಕ್ತಿತ್ವವನ್ನು ರೂಪಿಸಿ, ಸೃಜನಶೀಲತೆಯ ಸ್ವರೂಪದ ಮೇಲೆ ಗಾಢ ಪ್ರಭಾವ ಬೀರಿದೆ. ಹೊದಿಗೆರೆ ಗ್ರಾಮದ ಕೆರೆ, ಕೆರೆ ಕೋಡಿ, ಅದರಾಚೆಗೆ ಇದ್ದ ಈಚಲು ವನ, ನಂತರ ಜೋಳದಹಾಳ್‌ ಕಾಡು, ಕಂತರಂಗಮಟ್ಟಿ ಇಂತಹ ಸ್ಥಳಗಳು ಡಾ. ಎಚ್.ಎಸ್‌. ವೆಂಕಟೇಶಮೂರ್ತಿ ಅವರ ಮನಸಿನ ಮೇಲೆ ಸಾಕಷ್ಟು ಪರಿಣಾಮ ಬೀರುವ ಮೂಲಕ ಆಸರೆಯಾದವು. ಆಗಾಗ ಹುಟ್ಟೂರಿಗೆ ಬಂದು ಹೋಗುತ್ತಿದ್ದ ವೆಂಕಟೇಶ ಮೂರ್ತಿ ಹೊದಿಗೆರೆಗೆ ಬಂದು ಬಂಧು-ಬಳಗವನ್ನು ಭೇಟಿ ಮಾಡಿ, ತಾವು ಬಾಲ್ಯದಲ್ಲಿ ಆಡಿ, ಬೆಳೆದ ಊರಿನ ನೆನಪುಗಳನ್ನು ಮೆಲಕು ಹಾಕಿದ್ದರು.

- - -

* ಹೊದಿಗೆರೆ ಕರಿಹೆಂಚಿನ ಮನೆ ಸ್ಮಾರಕವಾಗಿಸುವ ಚಿಂತನೆ

ಚನ್ನಗಿರಿ: ತಾಲೂಕಿನ ಇತಿಹಾಸ ಪ್ರಸಿದ್ಧ ಹೊದಿಗೆರೆ ಗ್ರಾಮದ ಎಚ್.ಎಸ್.ವಿ. ಬಾಲ್ಯದ ದಿನಗಳನ್ನು ಹೊದಿಗೆರೆ ಗ್ರಾಮದಲ್ಲಿಯೇ ಕಳೆದವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಪಡೆದ ಸಾಹಿತಿ ಎಚ್.ಎಸ್.ವಿ., ಚನ್ನಗಿರಿ ತಾಲೂಕಿನ ಸಾಹಿತ್ಯ ಪ್ರತಿಭೆ ಎನಿಸಿದ್ದರು. ಈಗ ಅವರೇ ಇಲ್ಲದಂತಾಗಿರುವುದು ನಾಡಿನ ಸಾಹಿತ್ಯ ಕ್ಷೇತ್ರದ ಕೊಂಡಿ ಕಳಚಿದಂತಾಗಿದೆ.ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಸಾಹಿತ್ಯದ ಕಂಪನ್ನು ಪಸರಿಸುವ ಸಲುವಾಗಿ ಎಚ್.ಎಸ್. ವೆಂಕಟೇಶ ಮೂರ್ತಿ ಸಾಹಿತ್ಯಾಭಿಮಾನಿಗಳ ಬಳಗವನ್ನು 15 ವರ್ಷಗಳ ಹಿಂದೆಯೇ ಅಭಿಮಾನಿಗಳಾದ ಸುಮತೀಂದ್ರ, ಕೃಷ್ಣಮೂರ್ತಿ ಕಶ್ಯಪ್, ರಮೇಶ್, ಗುರುಪ್ರಸಾದ್, ಅರುಣ್ ಸೇರಿದಂತೆ ಇನ್ನು ಹಲವರು ಬಳಗ ರಚಿಸಿಕೊಂಡು ಅವರ ಸಾಹಿತ್ಯದ ಗಾಯನ ಮಾಡುತ್ತಿದ್ದರು.

ಎಚ್.ಎಸ್. ವೆಂಕಟೇಶಮೂರ್ತಿ ಅವರು ತಾಲೂಕಿನ ಹೊದಿಗೆರೆಯಲ್ಲಿರುವ ಹಳೆಯ ಕರಿಹಂಚಿನ ಮನೆಯಲ್ಲಿ ಬದುಕಿದವರು. ಈ ಮನೆಯನ್ನು ಸಂರಕ್ಷಿಸಿ, ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವುದು, ಬದುಕು-ಬರಹವನ್ನು ಪ್ರತಿಬಿಂಬಿಸುವಂತಹ, ಅವರೇ ಬರೆದಂತಹ ಸಾಹಿತ್ಯದ ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲ ಈ ಸ್ಮಾರಕ ಭವನದಲ್ಲಿ ಕಾಪಿಡುವ ಆಲೋಚನೆ ಇದೆ ಎಂದು ಎಚ್.ಎಸ್.ವಿ. ಸಾಹಿತ್ಯಾಭಿಮಾನಿ ಬಳಗದ ಮಠದ ಗುರು ಹೇಳುತ್ತಾರೆ.ಎಚ್‌ಎಸ್‌ವಿ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಡಾ. ಎಚ್.ಎಸ್.ವಿ. ಸಾಹಿತ್ಯಾಭಿಮಾನಿ ಬಳಗ, ತಾಲೂಕು ಬ್ರಾಹ್ಮಣ ಸಮಾಜ ಸಂತಾಪ ಸೂಚಿಸಿವೆ.

- - --30ಕೆಸಿಎನ್‌ಜಿ2.ಜೆಪಿಜಿ:

ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ನಾಡಿನ ಹೆಸರಾಂತ ಸಾಹಿತಿ ಹೆಚ್.ಎಸ್.ವೆಂಕಟೇಶ ಮೂರ್ತಿ ಅವರ ಕರಿಹಂಚಿನ ಮನೆ)

- - -

(ಎಚ್‌.ಎಸ್‌. ವೆಂಕಟೇಶ ಮೂರ್ತಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ