ಬಳ್ಳಾರಿ: ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಬಿಮ್ಸ್ ಆಸ್ಪತ್ರೆ ಆವರಣದಲ್ಲಿನ ಜನೌಷಧಿ ಕೇಂದ್ರ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಬಡಜನರಿಗೆ ಅನುಕೂಲ ಒದಗಿಸುವ ಕೇಂದ್ರಗಳನ್ನು ಮುಂದುವರಿಸಬೇಕು. ಜನರ ಆರೋಗ್ಯಕ್ಕೆ ಧಕ್ಕೆಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಹಾಗೂ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಬಡವರಿಗೆ ಹೆಚ್ಚು ಅನುಕೂಲವಾಗಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ಖಂಡನೀಯ. ಬಿಮ್ಸ್ ಸೇರಿದಂತೆ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ಸಮರ್ಪಕವಾಗಿ ಔಷಧಿ ನೀಡಲು ರಾಜ್ಯ ಸರ್ಕಾರದಿಂದಾಗುತ್ತಿಲ್ಲ. ಬಿಮ್ಸ್ ಆಸ್ಪತ್ರೆಯ ರೋಗಿಗಳು ಹೊರಗಡೆ ಔಷಧಿಗಳನ್ನು ಖರೀದಿಸುವಂತಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಆರಂಭಿಸಿರುವ ಜನೌಷಧಿ ಕೇಂದ್ರದಿಂದ ಬಡಜನರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಇದನ್ನುಅರ್ಥ ಮಾಡಿಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ಬಡಜನರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದು, ಜನೌಷಧಿ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಪಕ್ಷದ ಮುಖಂಡರಾದ ಎಸ್. ಗುರುಲಿಂಗನಗೌಡ, ಎಚ್. ಹನುಮಂತಪ್ಪ, ಕೆ.ಎ. ರಾಮಲಿಂಗಪ್ಪ, ಶ್ರೀನಿವಾಸ ಮೋತ್ಕರ್, ಸುರೇಖಾ ಮಲ್ಲನಗೌಡ ಹಾಗೂ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.