ಹುಬ್ಬಳ್ಳಿ:
ಅವರು ಇಲ್ಲಿನ ಬಿವಿಬಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಧಾರವಾಡ ವಲಯದಲ್ಲಿ 2021–22, 2022-23, 2023-24ನೇ ಸಾಲಿನಲ್ಲಿ ನಡೆದ ವಿವಿಧ ಟೂರ್ನಿಗಳ ವಿಜೇತ ತಂಡಗಳಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಹುಬ್ಬಳ್ಳಿಯಲ್ಲಿಯೂ ಆಯೋಜಿಸುವಂತೆ ಹಲವು ಮನವಿಗಳು ಬಂದಿವೆ. ಆದರೆ, ಹಲವು ಸೌಲಭ್ಯಗಳ ಕೊರತೆ ಕಾರಣ ಸದ್ಯಕ್ಕೆ ಬೆಂಗಳೂರು ಬಿಟ್ಟು ಬೇರೆಡೆ ಆಯೋಜಿಸಲು ಆಗುತ್ತಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸೌಲಭ್ಯವಿದ್ದು, ಮಳೆ ಬಂದರೂ 20 ನಿಮಿಷದಲ್ಲಿ ಪಂದ್ಯ ಆರಂಭಿಸಬಹುದು. ಅಲ್ಲದೆ, ಅಧಿಕೃತ ಪ್ರಸಾರ ವಾಹಿನಿಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆದರೆ ನೇರಪ್ರಸಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಕೆಎಸ್‌ಸಿಎ ಧಾರವಾಡ ವಲಯದ ಚೇರ್‌ಮನ್ ವೀರಣ್ಣ ಸವಡಿ ಮಾತನಾಡಿ, ಸಂಸ್ಥೆಯ ಹಿಂದಿನ ಸಮಿತಿ ನೀಡಿದ ಪ್ರೋತ್ಸಾಹದಿಂದ ಧಾರವಾಡ ವಲಯದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಹುಬ್ಬಳ್ಳಿ, ಬೆಳಗಾವಿಯಲ್ಲಿ ಕ್ರೀಡಾಂಗಣಗಳಿವೆ. ಉತ್ತಮ ಮೂಲಸೌಕರ್ಯಗಳಿಂದಾಗಿ ಧಾರವಾಡ ವಲಯದ ಆಟಗಾರರು ವಿವಿಧ ವಯೋಮಾನದವರ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರು.ರಾಜನಗರ ಕ್ರೀಡಾಂಗಣದಲ್ಲಿ ಕ್ರೀಡಾ ಕೇಂದ್ರ ಕಾಮಗಾರಿ ಬಾಕಿ ಇದೆ. ಅದನ್ನು ಪೂರ್ಣಗೊಳಿಸಬೇಕು. ಹುಬ್ಬಳ್ಳಿಯಲ್ಲಿ ಸಾಕಷ್ಟು ಅಭಿಮಾನಿಗಳಿದ್ದು, ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಇಲ್ಲಿಯೂ ಆಯೋಜಿಸುವಂತೆ ಮನವಿ ಮಾಡಿದರು.
ಕೆಎಸ್‌ಸಿಎ ವಿಭಾಗೀಯ ಉಸ್ತುವಾರಿ ಎಂ.ಎಸ್. ವಿನಯ್ ಮಾತನಾಡಿ, ರಾಜ್ಯದ ಆಟಗಾರರು ಇತ್ತೀಚಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ಧಾರೆ. 14 ವರ್ಷದೊಳಗಿನವರ ತಂಡ, ಕೂಚ್ ಬೆಹಾರ್, ಸಿ.ಕೆ. ನಾಯ್ಡು, ಮಹಿಳೆಯರ ಟ್ವೆಂಟಿ-20 ತಂಡಗಳು ಚಾಂಪಿಯನ್ ಆಗಿವೆ. ಆಟಗಾರರು ಕ್ರೀಡೆಯ ಜತೆಗೆ ಓದಿನ ಕಡೆಗೂ ಗಮನ ಹರಿಸಬೇಕು ಎಂದರು.