ಕನ್ನಡಪ್ರಭ ವಾರ್ತೆ ಕುಂದಾಪುರ
ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪಂಚವರ್ಣ ಸಂಘಟನೆಯ ಕಾರ್ಯ ಅತ್ಯಂತ ಪ್ರಶಂಸನೀಯವಾದದ್ದು ಎಂದು ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಹೇಳಿದರು.ಅವರು ಬುಧವಾರ ಕೋಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಆಶ್ರಯದಲ್ಲಿ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲಗಳ ನೇತೃತ್ವದಲ್ಲಿ ಎಜ್ಯುಕೇರ್ ಸಂಸ್ಥೆ, ಗ್ರಾಮ ಪಂಚಾಯಿತಿ ಕೋಟ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ, ಪಿಎಂ ವಿಶ್ವಕರ್ಮ ಯೋಜನೆ, ಮೀನುಗಾರಿಕಾ ಕಾರ್ಡ್, ರಿಕ್ಷಾ ಚಾಲಕರ ಇ. ಕಾರ್ಡ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಅಮೃತೇಶ್ವರಿ ದೇಗುಲದ ಧರ್ಮದರ್ಶಿ ಆನಂದ್ ಸಿ. ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉಡುಪಿ ಅಂಚೆ ವಿಭಾಗದ ಅಧೀಕ್ಷ ರಮೇಶ್ ಪ್ರಭು, ಕುಂದಾಪುರ ದಕ್ಷಿಣ ಉಪ ವಿಭಾಗದ ಅಂಚೆ ನಿರೀಕ್ಷಕ ನಾಗಾಂಜನೇಯಲು, ಕೋಟ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ, ಸದಸ್ಯರಾದ ಅಜಿತ್ ದೇವಾಡಿಗ, ವನಿತಾ ಶ್ರೀಧರ ಆಚಾರ್, ಶಿವರಾಮ ಶೆಟ್ಟಿ, ಉಡುಪಿ ಕಾರ್ಮಿಕ ಇಲಾಖೆಯ ಅಧಿಕಾರಿ ಮಲ್ಲಿಕ್ ಪ್ರಸಾದ್, ಕೋಟ ಪಿಡಿಒ ಸುರೇಶ್ ಬಂಗೇರ, ಗ್ರಾಮ ಲೆಕ್ಕಿಗ ಚಲುವರಾಜ್, ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷ ಲಲಿತಾ ಪೂಜಾರಿ, ಸ್ಥಾಪಾಕಾಧ್ಯಕ್ಷ ಸುರೇಶ್, ಏಜುಕೇರ್‌ನ ಚೇತನ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯದರ್ಶಿ ನಿತೀನ್ ಕುಮಾರ್ ವಂದಿಸಿದರು.ಸುಮಾರು 300ಕ್ಕೂ ಅಧಿಕ ಮಂದಿ ಆಧಾರ್ ಹಾಗೂ 150ಕ್ಕೂ ಅಧಿಕ ಮಂದಿ ಆಟೋ ಇ ಕಾರ್ಡ್ ಜತೆಗೆ ಸರ್ಕಾರದ ವಿವಿಧ ಯೋಜನಾ ಅಭಿಯಾನದ ಪ್ರಯೋಜನ ಪಡೆದರು.