ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆ ಬಿಟ್ಟು ವಿದ್ಯಾವಂತರಾಗಿ ಕಾನೂನು ಅರಿವನ್ನು ಬೆಳೆಸಿಕೊಂಡು, ಜಾಗೃತರಾಗಿ ಸಮಾಜದಲ್ಲಿನ ಶೋಷಣೆ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಭೂಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೈರಪ್ಪ ಅವರು ಕರೆ ನೀಡಿದರು.ತಾಲೂಕಿನ ಭೂಹಳ್ಳಿ ಗ್ರಾಮ ಪಂಚಾಯಿತಿಯಿಂದ ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ಹಳೇ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ವಿಶೇಷ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಗತಿಯನ್ನು ಸಾಧಿಸುತ್ತಿದ್ದರೂ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ, ದಬ್ಬಾಳಿಕೆ, ಬಾಲ್ಯ ವಿವಾಹ, ಭ್ರೂಣಹತ್ಯೆ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ, ಲಿಂಗತ್ವ ಅಸಮಾನತೆಯಂತಹ ಮಹಾ ಪಿಡುಗುಗಳು, ಕುಟುಂಬಗಳಲ್ಲಿ ಸಾಮರಸ್ಯದ ಕೊರತೆಯನ್ನು ಇಂದಿಗೂ ನಾವು ಕಾಣುತ್ತಿದ್ದೇವೆ. ಸಮಾಜದಲ್ಲಿ ಇದನ್ನು ತೊಡೆದು ಹಾಕಬೇಕಾದರೆ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಸಂವಿಧಾನದಲ್ಲಿ ಮಹಿಳೆಯರ ಹಿತರಕ್ಷಣೆಗಾಗಿರುವ ಕಾನೂನಿನ ಅರಿವನ್ನು ಬೆಳೆಸಿಕೊಂಡು ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಪರಿಹಾರವನ್ನು ಕಂಡುಕೊಳ್ಳುವುದರ ಜೊತೆಗೆ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಸಮಾನತೆ, ಉತ್ತಮ ಬಾಂಧವ್ಯವನ್ನು ಬೆಳೆಸಬೇಕು ಎಂದರು.ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜಾಗೃತರಾಗಿ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಆರ್ಥಿಕ ಸ್ವಾವಲಂಭಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಸೌಮ್ಯ ಮಾತನಾಡಿ, ಮಹಿಳೆಯರು ಜಾಗೃತರಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತನ್ನ ಎರಡು ಕಣ್ಣುಗಳಂತೆ ಕುಟುಂಬ ಮತ್ತು ಸಮಾಜವನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾವ್ಯ ಜೆ. ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭೂಹಳ್ಳಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು, ಮೆಣಸಿಗನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.