ನಾರಾಯಣ ಹೆಗಡೆ
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಮೂಲಸೌಕರ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಜಿಲ್ಲೆಯಲ್ಲಿ ಮೊದಲನೇ ತರಗತಿ ದಾಖಲಾತಿ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿರುವುದು ಶಿಕ್ಷಣ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ.
ಶಿಕ್ಷಣ ಇಲಾಖೆ ಸ್ಯಾಟ್ಸ್ ದಾಖಲಾತಿ ಪ್ರಗತಿ ವರದಿ ಪ್ರಕಾರ, ಜಿಲ್ಲಾದ್ಯಂತ ಮೊದಲನೇ ತರಗತಿಗೆ 17,093 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 23,673 ಮಕ್ಕಳು ದಾಖಲಾಗಿದ್ದರು. ಅಂದರೆ ಕೇವಲ ಒಂದು ವರ್ಷದಲ್ಲೇ 6,580 ಮಕ್ಕಳ ದಾಖಲಾತಿ ಕಡಿಮೆಯಾಗಿದ್ದು, ಇದು ಸುಮಾರು ಶೇ.27.8ರಷ್ಟು ಇಳಿಕೆಯಾಗಿದೆ.ಅದರಲ್ಲೂ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಕಳೆದ ವರ್ಷ 12,667 ಮಕ್ಕಳಿದ್ದ ದಾಖಲಾತಿ, ಈ ಶೈಕ್ಷಣಿಕ ಸಾಲಿನಲ್ಲಿ 8,556ಕ್ಕೆ ಇಳಿದಿದ್ದು, 4,111 ಮಕ್ಕಳ ಕೊರತೆ ಉಂಟಾಗಿದೆ. ನಿಗದಿಪಡಿಸಿದ್ದ ಗುರಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಮೊದಲನೇ ತರಗತಿ ದಾಖಲಾತಿ ಸಾಧನೆ ಕೇವಲ ಶೇ.70.13 ಮಾತ್ರವಾಗಿದೆ. ಜಿಲ್ಲೆಯ ಒಟ್ಟಾರೆ ಮೊದಲನೇ ತರಗತಿ ದಾಖಲಾತಿ ಪ್ರಗತಿ ಶೇ.74.03ರಷ್ಟು ಎಂದು ಶಿಕ್ಷಣ ಇಲಾಖೆಯ ಅಂಕಿಸಂಖ್ಯೆಯಿಂದ ತಿಳಿದುಬಂದಿದೆ.
ಕಾರಣ ಹಲವು: ಖಾಸಗಿ ಶಾಲೆಗಳತ್ತ ಪೋಷಕರ ಹೆಚ್ಚುತ್ತಿರುವ ಒಲವು, ನಗರ ಪ್ರದೇಶಗಳಿಗೆ ವಲಸೆ, ಇಂಗ್ಲಿಷ್ ಮಾಧ್ಯಮದ ಮೇಲಿನ ಆಕರ್ಷಣೆ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ವಿಲೀನ ಪ್ರಕ್ರಿಯೆ ಮೊದಲಾದ ಅಂಶಗಳು ದಾಖಲಾತಿ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳ ಕುರಿತು ಶಿಕ್ಷಣ ಇಲಾಖೆ ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ.
ಮೊದಲನೇ ತರಗತಿ ದಾಖಲಾತಿಯ ಈ ಇಳಿಮುಖ ಪ್ರವೃತ್ತಿಯನ್ನು ಕೇವಲ ಅಂಕಿ-ಅಂಶವಾಗಿ ನೋಡುವುದಕ್ಕಿಂತ, ಸರ್ಕಾರಿ ಶಾಲೆಗಳ ಭವಿಷ್ಯದ ಬಗ್ಗೆ ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕಾಗಿದೆ ಎಂಬುದು ಶಿಕ್ಷಣ ತಜ್ಞರ ಅಭಿಮತವಾಗಿದೆ.
ತಾಲೂಕು 2025–26 2026–27
ಹಾನಗಲ್ಲ 2,335 1,591
ಹಿರೇಕೆರೂರು 1,742 1,114
ಸವಣೂರು 1,613 1,090
ಶಿಗ್ಗಾಂವಿ 1,694 1,138ಒಟ್ಟು 12,667 8556