ಬಳ್ಳಾರಿ: ಇಂದಿನ ಡಿಜಿಟಲ್ ಯುಗದಲ್ಲಿಯೂ ಪತ್ರಿಕೆಗಳ ಮಹತ್ವ ಕಡಿಮೆಯಾಗಿಲ್ಲ. ಮುದ್ರಿತ ಪತ್ರಿಕೆ ಅಥವಾ ಇ-ಪೇಪರ್ ಯಾವುದೇ ರೂಪದಲ್ಲಿದ್ದರೂ ನಿಯಮಿತವಾಗಿ ಪತ್ರಿಕೆ ಓದುವ ಅಭ್ಯಾಸ ವ್ಯಕ್ತಿತ್ವ ವಿಕಸನಕ್ಕೆ, ಚಿಂತನಶಕ್ತಿಯ ಬೆಳವಣಿಗೆಗೆ ಹಾಗೂ ಉತ್ತಮ ನಾಗರಿಕನಾಗಲು ಸಹಕಾರಿಯಾಗಬಲ್ಲದು ಎಂದು ಹಿರಿಯ ಪತ್ರಕರ್ತ ಕೆ.ಎಂ. ಮಂಜುನಾಥ್ ತಿಳಿಸಿದರು.
ಪತ್ರಿಕೆ ಸೇರಿದಂತೆ ಪಠ್ಯಪುಸ್ತಕ ಹೊರತಾಗಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗ್ರಂಥಾಲಯಗಳ ಜೊತೆ ನಿರಂತರ ಒಡನಾಟ ಇಟ್ಟುಕೊಳ್ಳಬೇಕು. ಬಿಡುವಿನ ವೇಳೆಯಲ್ಲಷ್ಟೇ ಅಲ್ಲ, ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನು ಓದುವ ಅಭಿರುಚಿ ಮೈಗೂಡಿಸಿಕೊಳ್ಳುವುದರಿಂದ ಜ್ಞಾನಾಭಿವೃದ್ಧಿಗೆ ಜೊತೆಗೆ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು ಕುರಿತು ಹಿರಿಯ ಚಿಂತಕ ಕೆ.ಬಿ. ಸಿದ್ಧಲಿಂಗಪ್ಪ ಉಪನ್ಯಾಸ ನೀಡಿದರು. ಬಸವಾದಿ ಶರಣರು ಸಾಮರಸ್ಯದ ಬದುಕಿಗೆ ನೀಡಿದ್ದ ಆದ್ಯತೆಯ ಕುರಿತು ಸಿದ್ಧಲಿಂಗಪ್ಪ ಅವರು ವಿಶ್ಲೇಷಿಸಿದರು.ಕಾಲೇಜಿನ ಪ್ರಾಂಶುಪಾಲ ಬಿ.ವಿ. ರಾಜೇಶ್, ಸಾರಿಗೆ ಇಲಾಖೆಯ ಕಾರ್ಮಿಕ ಅಧಿಕಾರಿ ಕರಿಗೌಡ ಮಾತನಾಡಿದರು. ಕಸಾಪ ಕೋಶಾಧ್ಯಕ್ಷ ಬಸವರಾಜ ಗದಗಿನ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಸುಧೀರ್ ಉಪಸ್ಥಿತರಿದ್ದರು.