ಕೆಪಿಎಸ್ಸಿ ಹಗರಣ ಹೋರಾಟ ರೂಪಿಸಲು ರಾಹುಲ್‌ ಗಾಂಧಿ ಕರ್ನಾಟಕಕ್ಕೂ ಬರಲಿ: ಶ್ರೀರಾಮುಲು

KannadaprabhaNewsNetwork |  
Published : Jul 28, 2026, 02:00 AM IST
ಬಿ.ಶ್ರೀರಾಮುಲು  | Kannada Prabha

ಸಾರಾಂಶ

ದೆಹಲಿಯಲ್ಲಿ ವಿದ್ಯಾರ್ಥಿ- ಯುವಜನರ ಹೋರಾಟವನ್ನು ತಪ್ಪು ಎಂದು ಹೇಳುವುದಿಲ್ಲ.

ಬಳ್ಳಾರಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸತ್ಯಹರಿಶ್ಚಂದ್ರನಂತೆ ಹೋರಾಟ ಮಾಡಿದ ರಾಹುಲ್ ಗಾಂಧಿ ಕೆಪಿಎಸ್ಸಿ ಹಗರಣದ ಹೋರಾಟಕ್ಕೆ ಕರ್ನಾಟಕಕ್ಕೆ ಬಂದು ಹೋರಾಟ ರೂಪಿಸುವಂತೆ ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ವಿದ್ಯಾರ್ಥಿ- ಯುವಜನರ ಹೋರಾಟವನ್ನು ತಪ್ಪು ಎಂದು ಹೇಳುವುದಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆಯನ್ನು ಸಹ ನಾನು ಅಲ್ಲಗಳೆಯುವುದಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಯುವಜನರ ಚಳವಳಿಯಲ್ಲಿ ಗುರುತಿಸಿಕೊಂಡ ರಾಹುಲ್‌ ಗಾಂಧಿ ಕರ್ನಾಟಕಕ್ಕೂ ಬರಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಹಗರಣಗಳು, ಕೆಪಿಎಸ್ಸಿ ವಂಚನೆ ಪ್ರಕರಣಗಳ ಬಗ್ಗೆಯೂ ಹೋರಾಟ ಮಾಡಬೇಕಲ್ಲವೇ? ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ವಿದ್ಯಾರ್ಥಿ- ಯುವಜನರ ಹಿತಾಸಕ್ತಿಗಳ ಬಗ್ಗೆ ಮಾತನಾಡುವಲ್ಲಿ ಕಾಂಗ್ರೆಸ್ ಪಕ್ಷ ನೈತಿಕತೆ ಕಳೆದುಕೊಂಡಿದೆ. ಯುವ ಸಮುದಾಯದ ಬಗ್ಗೆ ಇವರಿಗೆ ಯಾವ ಕಾಳಜಿ ಇಲ್ಲ. ಕೆಪಿಎಸ್ಸಿ ಹಗರಣ ಹೊರ ಬಿದ್ದ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಜನ ಸಚಿವರು ರಾಜೀನಾಮೆ ನೀಡಿದ್ದಾರೆ? ಕೆಪಿಎಸ್ಸಿ ಹಗರಣದ ಬಗ್ಗೆ ರಾಹುಲ್‌ ಗಾಂಧಿಯವರ ನಿಲುವು ಏನು? ಕೂಡಲೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಿಯಾಂಕ್ ಗಾಂಧಿ ಅವರಿಗೆ ಸೂಚನೆ ನೀಡುತ್ತಾರಾ? ಎಂದು ಕೇಳಿದರು.

ಕೂಡಲೇ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಬಂದು ಕೆಪಿಎಸ್ಸಿ ಹಗರಣ ವಿರುದ್ಧ ಹೋರಾಟ ಆರಂಭಿಸಲಿ. ನಮ್ಮ ನಾಡಿನ ಮಕ್ಕಳಿಗೆ ಆಗಿರುವ ಅನ್ಯಾಯವನ್ನು ಸಹ ಸರಿಪಡಿಸಲಿ ಎಂದು ಶ್ರೀರಾಮುಲು ಆಗ್ರಹಿಸಿದರು.

ಬರಗಾಲ ನಿರ್ವಹಣೆ ವಿಫಲ:

ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು, ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ದೊಡ್ಡ ಸಂಖ್ಯೆಯಲ್ಲಿ ಗುಳೆ ಹೋಗುತ್ತಿದ್ದಾರೆ. ಆದರೆ, ಈವರೆಗೆ ಬರ ನಿರ್ವಹಣೆ ಸಂಬಂಧ ಯಾವುದೇ ಕಾರ್ಯ ಯೋಜನೆ ರೂಪಿಸಿಕೊಂಡಿಲ್ಲ. ಇನ್ನು ಡ್ರೋನ್ ಮೂಲಕ ಸರ್ವೆ ಕಾರ್ಯ ಮಾಡುವುದರಲ್ಲಿಯೇ ಇದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ಮತ್ತು ದೆಹಲಿಗೆ ಸೀಮಿತವಾಗುವ ಬದಲು ರಾಜ್ಯದ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಬರ ಪರಿಹಾರ ಕಾರ್ಯಕ್ಕೆ ಕೂಡಲೇ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

ದೇಶದ ವಿದ್ಯಾರ್ಥಿ-ಯುವಜನರ ಹಿತದೃಷ್ಟಿಯಿಂದ ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ಲೀಕ್‌ಗೆ 10 ವರ್ಷ ಜೈಲು, ₹10 ಕೋಟಿ ದಂಡ ವಿಧಿಸುವ ಬಿಲ್ ಮಂಡನೆಯಾಗುತ್ತಿದೆ. ವಿದ್ಯಾರ್ಥಿಗಳ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಅಗತ್ಯ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಶ್ರೀನಿವಾಸ ಮೋತ್ಕರ್, ಹನುಮಂತ ಗುಡಗಂಟಿ, ತಿಮ್ಮಪ್ಪ, ವೆಂಕಟರಾಮರೆಡ್ಡಿ, ವೇಮಣ್ಣ, ಓಬಳೇಶ ಸುದ್ದಿಗೋಷ್ಠಿಯಲ್ಲಿದ್ದರು.

ಸಿದ್ದುಗೆ ಈಗ ರಾಜಕೀಯ ಕಲುಷಿತ ಎನಿಸಿತೆ?

ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಕಲುಷಿತಗೊಂಡಿದೆ. ಹೀಗಾಗಿ ಚುನಾವಣೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಸಿದ್ಧರಾಮಯ್ಯ ಅವರಿಗೆ ಈವರೆಗೆ ಕಾಣಿಸದ ರಾಜಕೀಯ ಕಲುಷಿತ ಡಿ.ಕೆ. ಶಿವಕುಮಾರ್ ಸಿಎಂ ಆದ ಮೇಲೆ ಕಂಡು ಬಂತೇ? ಈವರೆಗೆ ಕಲುಷಿತಗೊಂಡಿರಲಿಲ್ಲವೇ? ಸಿದ್ದರಾಮಯ್ಯಗೆ ಅಧಿಕಾರ ಇರುವವರೆಗೂ ರಾಜಕೀಯ ಶುದ್ಧವಿತ್ತು. ಈಗ ಕಲುಷಿತ ಎಂದು ಗೊತ್ತಾಯಿತೇ ಎಂದು ಶ್ರೀರಾಮುಲು ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಸಿದ್ದರಾಮಯ್ಯರ ಜೊತೆ ಸರಿಯಾಗಿ ನಡೆದುಕೊಂಡಿಲ್ಲವೋ, ಅಪಮಾನ ಮಾಡಲಾಗಿದೆಯೋ ಹೀಗಾಗಿಯೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ. ಬಹುಶಃ ಸಿಎಂ ನಡೆದುಕೊಂಡ ರೀತಿಯ ಬಗ್ಗೆ ಅಸಮಾಧಾನ ಇರಬಹುದು. ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಕಲುಷಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ ಎಂದು ಶ್ರೀರಾಮುಲು ತಿಳಿಸಿದರು.

ದೆಹಲಿಯ ವಿದ್ಯಾರ್ಥಿ ಹೋರಾಟದಲ್ಲಿ ರಾಹುಲ್‌ ಗಾಂಧಿ ಜೊತೆ ಪಾಲ್ಗೊಂಡಿದ್ದ ಕರ್ನಾಟಕದ ಮುಖ್ಯಮಂತ್ರಿ ಬಾಡಿಗಾರ್ಡ್‌ನಂತೆ ರಾಹುಲ್ ಗಾಂಧಿ ಕಾರ್ ಹಿಂದೆ ಓಡುತ್ತಿದ್ದರು ಎಂದು ವ್ಯಂಗ್ಯವಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಯಮಿತ ಓದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ
ಕಾರ್ಗಿಲ್ ವಿಜಯ ದಿವಸ: ಸೈನಿಕರ ಶೌರ್ಯ ಸ್ಮರಣೆಗೆ ಎಬಿವಿಪಿಯಿಂದ ಪಂಜಿನ ಮೆರವಣಿಗೆ