ಈ ಬಾರಿಯಾದರೂ ಈಡೇರುವುವೇ ವಿವಿಧ ಬೇಡಿಕೆಗಳು । ಗರಿಗೆದರಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು
ವಸಂತಕುಮಾರ ಕತಗಾಲ
ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲೆಯ ಜನತೆ ಈ ಬಾರಿ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉನ್ನತ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಬೆಳವಣಿಗೆ ಮತ್ತಿತರ ಬೇಡಿಕೆಗಳು ಈ ಬಾರಿಯಾದರೂ ಈಡೇರೀತೆ ಎಂದು ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪ್ರವಾಸಿ ತಾಣಗಳಿಗೆ ಜಿಲ್ಲೆಯಲ್ಲಿ ಬರವಿಲ್ಲ. ಆದರೆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಪ್ರವಾಸೋದ್ಯಮದ ಸಾಧ್ಯತೆಗಳೂ ಸಾಕಷ್ಟಿವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಈ ಬಾರಿಯಾದರೂ ಕೊಡುಗೆ ಸಿಗಬಹುದು ಎಂದು ಆಶಾವಾದ ಜನತೆಯದ್ದಾಗಿದೆ.ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶಗಳಿಲ್ಲದೆ ಯುವ ಜನತೆ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಗಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.
ಅಡಕೆ ಬೆಳೆಗಾರರು, ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರು, ಮೀನುಗಾರರಿಗೆ ಈ ಬಜೆಟ್ ಪೂರಕವಾಗಿರಲಿ ಎನ್ನುವುದು ರೈತರ ಹಾಗೂ ಮೀನುಗಾರರ ಆಶಯವಾಗಿದೆ.ಇನ್ನೂ ಹತ್ತು ಹಲವು ನಿರೀಕ್ಷೆಗಳನ್ನು ಈ ಬಜೆಟ್ ಮೇಲೆ ಜನತೆ ಇಟ್ಟುಕೊಂಡಿದ್ದಾರೆ. ಅವೆಲ್ಲ ಈಡೇರೀತೆ ಎನ್ನುವ ಕುತೂಹಲಕ್ಕೆ ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಉತ್ತರ ನೀಡಲಿದೆ.--2025-26 ಬಜೆಟ್‌ನಲ್ಲಿ ಗಮನಾರ್ಹ ಕೊಡುಗೆ ಇಲ್ಲಮುಖ್ಯಮಂತ್ರಿ ಸಿದ್ದರಾಮಯ್ಯ 2025-26ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಗಮನಾರ್ಹ ಕೊಡುಗೆ ಇರಲಿಲ್ಲ. ಜೋಯಿಡಾ ಸಾವಯವ ತಾಲೂಕಾಗಿಸಲು ಘೋಷಿಸಲಾಗಿತ್ತು. ಅದರ ಆರಂಭಿಕ ಪ್ರಕ್ರಿಯೆಗಳು ಶುರುವಾಗಿವೆ.
ಸಾವಯವ ತಾಲೂಕು ಘೋಷಣೆಗೆ 3 ವರ್ಷಗಳ ಕಾಲಾವಕಾಶ ನಿಗದಿ ಮಾಡಲಾಗಿದ್ದು, ಇದುವರೆಗೆ ಕೇವಲ ₹1 ಕೋಟಿ ಮಾತ್ರ ಬಂದಿದ್ದು, ಕೃಷಿ ಇಲಾಖೆ ₹10 ಕೋಟಿಗೆ ಬೇಡಿಕೆ ಇಟ್ಟಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಸಾವಯವ ತಾಲೂಕು ಘೋಷಣೆಗೆ ಚಾಲನೆ ನೀಡಿದ್ದಾರೆ.ಇನ್ನು ನೌಕಾನೆಲೆ ವಿಮಾನ ನಿಲ್ದಾಣ ಕಾಮಗಾರಿ ಶುರುವಾಗುವ ಭರವಸೆ ನೀಡಲಾಗಿತ್ತಾದರೂ ಅದಿನ್ನೂ ಆರಂಭವಾಗಿಲ್ಲ. ಇದನ್ನು ಹೊರತು ಪಡಿಸಿದರೆ ಉತ್ತರ ಕನ್ನಡಕ್ಕೆ ಸೀಮಿತವಾದ ಯಾವುದೇ ಯೋಜನೆಗಳಿಲ್ಲ. ಭೂಕುಸಿತ ತಡೆ, ಕೆಎಫ್‌ಡಿ ನಿಯಂತ್ರಣ, ಮೀನುಗಾರಿಕೆ ಕೊಂಡಿ ರಸ್ತೆ, ಅಡಕೆ ಸಸ್ಯ ಸಂರಕ್ಷಣೆ ಹೀಗೆ ಕೆಲವು ಜಿಲ್ಲೆಗಳನ್ನು ಸೇರಿಸಿ ಯೋಜನೆ ರೂಪಿಸಲಾಗಿತ್ತು. ಅದಿನ್ನೂ ಜಾರಿಗೆ ಬರಬೇಕಾಗಿದೆ.
ಮಂಕಿ ಬಂದರು ನಿರ್ಮಾಣ, ಹೊನ್ನಾವರ ಹಡಗು ನಿರ್ಮಾಣ ಘಟಕ, ನದಿ ಕ್ರ್ಯೂಸ್ ಪ್ರವಾಸೋದ್ಯಮಗಳಿಗೆ ವಿಸ್ತ್ರತ ಯೋಜನಾ ವರದಿ ರೂಪಿಸುವುದನ್ನು ಪ್ರಸ್ತಾಪಿಸಲಾಗಿತ್ತು. ಯೋಜನಾ ವರದಿ ರೂಪಿಸಲಾಗಿದೆ.