ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಸುದ್ದಿಮನೆಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬೇಡಿದವರ ಇಷ್ಟಾರ್ಥಗಳನ್ನು ಪೂರೈಸುವ ಐತಿಹ್ಯ ಹೊಂದಿರುವ ಇಲ್ಲಿನ ಶ್ರೀ ಹುಚ್ಚರಾಯಸ್ವಾಮಿ ಐತಿಹಾಸಿಕವಾಗಿ ಪ್ರಸಿದ್ದವಾಗಿದ್ದು ನಾಡಿನ ಮೂಲೆ ಮೂಲೆಯಿಂದ ಭಕ್ತಾಧಿಗಳು ಸ್ವಾಮಿಯ ದರ್ಶನಕ್ಕೆ ನಿತ್ಯ ಆಗಮಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಭಕ್ತ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಧಾವಿಸುತ್ತಿದ್ದು ಶ್ರಾವಣ ಶನಿವಾರ ಭಕ್ತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತದೆ. ಪರಸ್ಥಳದಿಂದ ಪುರುಷರು, ಮಹಿಳೆ, ಮಕ್ಕಳ ಸಹಿತ ವೃದ್ದರು ಶ್ರದ್ದಾ ಭಕ್ತಿಯಿಂದ ಧಾವಿಸುವ ದೇವಸ್ಥಾನದಲ್ಲಿ ಕಳೆದ ಹಲವು ವರ್ಷಗಳಿಂದ ವರ್ತಕರ ಸಂಘ ಹಾಗೂ ರೈಸ್ ಮಿಲ್ ಮಾಲೀಕರು ಧಾವಿಸುವ ಭಕ್ತರಿಗೆ ಶ್ರದ್ದೆಯಿಂದ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಇದೇ 9ರ ಶನಿವಾರ ಮುಜರಾಯಿ ಅಧೀನದಲ್ಲಿನ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಅನ್ನ ಸಂತರ್ಪಣೆಗೆ ತಹಸೀಲ್ದಾರ್ ಅನುಮತಿ ಪಡೆದು ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸಂಜೆಯಿಂದ ಆರಂಭವಾಗುವ ಸಿದ್ಧತಾ ಕಾರ್ಯದಲ್ಲಿ ಇಲ್ಲಿನ ಸಮಸ್ತ ವರ್ತಕರು, ರೈಸ್ ಮಿಲ್ ಮಾಲೀಕರು ಅತ್ಯಂತ ಶ್ರದ್ಧೆಯಿಂದ ಪಾಲ್ಗೊಂಡು ತನುಮನ ಧನ ಸೇವೆ ಸಲ್ಲಿಸಲು ಸಿದ್ದರಾಗಿದ್ದಾರೆ ಎಂದರು.ತಾ.ವಿಹಿಂಪ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ್ ಮಾತನಾಡಿ, ವರ್ತಕರ ಸಂಘದ ವತಿಯಿಂದ ಇದೀಗ 11ನೇ ಬಾರಿ ಶ್ರಾವಣದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದ್ದು ಪ್ರತಿ ಬಾರಿ ಪುಷ್ಕಳ ಭೋಜನದಿಂದ ಭಕ್ತ ವರ್ಗ ಸಂತುಷ್ಟತೆ ಪಡೆದಿದ್ದಾರೆ. ಪ್ರತಿ ಅಧಿಕ ಶ್ರಾವಣದಲ್ಲಿ 25 ಸಾವಿರ ಅಧಿಕ ಭಕ್ತರು ನಾಡಿನ ಮೂಲೆಮೂಲೆಯಿಂದ ಆಗಮಿಸಿ ಸ್ವಾಮಿ ದರ್ಶನದ ಜತೆಗೆ ಅನ್ನಪ್ರಸಾದ ಸ್ವೀಕರಿಸಿದ್ದು ವರ್ತಕರ ರೈಸ್,ಮಿಲ್ ಮಾಲೀಕರ ಶ್ರಮ ಸಾರ್ಥಕವಾಗಿದೆ. ಅತ್ಯಂತ ಪ್ರಸಿದ್ದವಾದ ಹುಚ್ಚರಾಯಸ್ವಾಮಿ ದೇವಾಲಯ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದು ವಾರ್ಷಿಕ ಕೋಟ್ಯಂತರ ರು. ಆದಾಯ ಹೊಂದಿದ ದೇವಾಲಯದಲ್ಲಿ ಕನಿಷ್ಠ ಶ್ರಾವಣದಲ್ಲಿ ಅನ್ನಪ್ರಸಾದ ಕೊರತೆ ಸಮಸ್ತ ಭಕ್ತರಿಗೆ ತೀರಾ ನಿರಾಸೆ ಉಂಟಾಗಿದೆ.ಸಮೀಪದ ಸಾತೇನಹಳ್ಳಿ, ಕದರಮಂಡಲಗಿಯಲ್ಲಿನ ದೇವಾಲಯದಲ್ಲಿ ಶ್ರಾವಣದಲ್ಲಿ ನಿತ್ಯ ನಡೆಯುವ ಅನ್ನಪ್ರಸಾದ ಇಲ್ಲಿ ಮಾತ್ರ ನಡೆಯುತ್ತಿಲ್ಲ. ಈ ಬಗ್ಗೆ ತಾಲೂಕು ಆಡಳಿತ ತುರ್ತಾಗಿ ಗಮನಹರಿಸಿ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆ ಗೌರವಿಸಬೇಕು ಎಂದರು.ವರ್ತಕರ ಸಂಘದ ಲಕ್ಷ್ಮಣನಾಯ್ಕ, ಮಹಾರುದ್ರಪ್ಪ, ನಾಗರಾಜ, ಮಲ್ಲಿಕಾರ್ಜುನ (ಬೆಲ್ಲದ ಮಂಡಿ), ಗಜಾನನ, ಈರಣ್ಣ, ಚಂದ್ರಪ್ಪ ಮತ್ತಿತರರು ಹಾಜರಿದ್ದರು.