ಅಂಧ, ಅನಾಥರ ಆಶ್ರಯದಾತ ಕಲ್ಲಯ್ಯಜ್ಜನವರಿಗೇ ಜೀವಬೆದರಿಕೆಗೆ ಭಾರೀ ಆಕ್ರೋಶ

KannadaprabhaNewsNetwork |  
Published : Jun 26, 2026, 02:00 AM IST
ಕಲ್ಲಯ್ಯಜ್ಜನವರೊಂದಿಗೆ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ದೇಶದ ಯಾವುದೇ ಒಂದು ಸುಸಜ್ಜಿತ ಸಂಗೀತ ವಿಶ್ವವಿದ್ಯಾಲಯವೂ ಮಾಡದಂತಹ ಅಪ್ರತಿಮ ಸಾಧನೆಯನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮ ಮತ್ತು ಲಿಂ. ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಮಾಡಿ ತೋರಿಸಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ನಗರದ ಮುಕುಟವಾಗಿರುವ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಿಗೆ ಅದೇ ಆಶ್ರಮದ ಟ್ರಸ್ಟ್ ಕಮಿಟಿ ಸದಸ್ಯರಿಂದಲೇ ಜೀವಬೆದರಿಕೆ ಇದೆ ಎನ್ನುವುದು ಬುಧವಾರ ಬಹಿರಂಗಗೊಳ್ಳುತ್ತಿದ್ದಂತೆ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಆಶ್ರಮದ ಲಕ್ಷಾಂತರ ಭಕ್ತರಲ್ಲಿ ತೀವ್ರ ಆಕ್ರೋಶ, ಆತಂಕಕ್ಕೆ ಕಾರಣವಾಗಿದೆ. ಕಲ್ಲಯ್ಯಜ್ಜನವರಿಗೆ ಬೆದರಿಕೆ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಜೋರಾಗುತ್ತಿದೆ.

ದೇಶದ ಯಾವುದೇ ಒಂದು ಸುಸಜ್ಜಿತ ಸಂಗೀತ ವಿಶ್ವವಿದ್ಯಾಲಯವೂ ಮಾಡದಂತಹ ಅಪ್ರತಿಮ ಸಾಧನೆಯನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮ ಮತ್ತು ಲಿಂ. ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಮಾಡಿ ತೋರಿಸಿದ್ದಾರೆ. ತಂದೆ, ತಾಯಿ, ಕುಟುಂಬಸ್ಥರು ಹಾಗೂ ಸ್ವಂತ ಸಂಬಂಧಿಕರಿಂದಲೇ ಬೇಡವೆನಿಸಿಕೊಂಡಿದ್ದ ಸಾವಿರಾರು ಅಂಧ, ಅನಾಥ ಮಕ್ಕಳನ್ನು ಇವರೆಲ್ಲ ನಮ್ಮ ಮಕ್ಕಳು ಎಂದು ಎದೆಗಪ್ಪಿಕೊಂಡು, ಉಚಿತ ಆಶ್ರಯ ನೀಡಿ, ಜ್ಞಾನ ಹಾಗೂ ಕಲೆಯ ಭಿಕ್ಷೆ ನೀಡಿದ ಪರಮ ಪವಿತ್ರ ಪುಣ್ಯಭೂಮಿ ವೀರೇಶ್ವರ ಪುಣ್ಯಾಶ್ರಮವಾಗಿದೆ.

ಇಂದಿಗೂ ಲಕ್ಷಾಂತರ ಜೀವಗಳು ಇಲ್ಲಿ ಕಲಿತ ಸಂಗೀತ ವಿದ್ಯೆಯ ಬಲದ ಮೇಲೆಯೇ ಗೌರವಯುತ ಬದುಕು ಕಟ್ಟಿಕೊಂಡಿವೆ. ರಾಜ್ಯ ಮತ್ತು ದೇಶದ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ಇಂತಹ ಐತಿಹಾಸಿಕ ಆಶ್ರಮದ ಪ್ರಸ್ತುತ ಪೀಠಾಧಿಪತಿ ಕಲ್ಲಯ್ಯಜ್ಜನವರಿಗೇ ಜೀವಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡಿರುವ ಕರಾಳ ಪ್ರಕರಣ ಬೆಳಕಿಗೆ ಬಂದಿರುವುದು ಇಡೀ ನಾಡಿಗೆ ನಿರಾಸೆ ಮತ್ತು ತೀವ್ರ ನೋವು ಉಂಟುಮಾಡಿದೆ.

ಗುಸುಗುಸು: ಸದ್ಯ ಆಶ್ರಮದ ಆವರಣದಲ್ಲಿ ಬಿಗುವಿನ ವಾತಾವರಣವಿದೆ. ಮೇಲ್ನೋಟಕ್ಕೆ ಎಲ್ಲವೂ ಶಾಂತವಾಗಿ ಕಂಡರೂ ಒಳಗೊಳಗೇ ಕೆಲವು ಭಕ್ತರು ಕಲ್ಲಯ್ಯಜ್ಜನವರ ಪರವಾಗಿ ಮಾತನಾಡಿ ಅವರಿಗೆ ಸಾಂತ್ವನ ಹೇಳಿ, ನಾವು ಅವರೊಟ್ಟಿಗಿದ್ದೇವೆ ಎನ್ನುತ್ತಿದ್ದಾರೆ. ಆದರೆ ಇನ್ನು ಕೆಲವಾರು ಜನರು ಈ ತಿಕ್ಕಾಟ ಆಶ್ರಮದ ಒಳಮನೆಯಲ್ಲಿ ಹಲವಾರು ತಿಂಗಳುಗಳಿಂದಲೇ ನಡೆಯುತ್ತಿತ್ತು, ಈಗ ಸ್ಫೋಟಗೊಂಡಿದೆ. ಇದು ಮುಂದೆ ಇನ್ನೂ ದೊಡ್ಡ ಮಟ್ಟಕ್ಕೆ ಹೋಗುತ್ತದೆ ಎನ್ನುತ್ತಾರೆ. ಆದರೆ ಪ್ರಕರಣವು ಸಮಯ ಕಳೆದಂತೆಲ್ಲಾ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇನ್ನೊಂದೆಡೆ, ಜೀವಬೆದರಿಕೆ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಹಾಗೂ ಅವರ ಹಿಂಬಾಲಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎನ್ನುವ ಚರ್ಚೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.ಭದ್ರತೆ ನೀಡಲು ಮನವಿ

ಗುರುವಾರ ಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಗದಗ ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರು, ಕಪ್ಪತ್ತಗುಡ್ಡದಲ್ಲಿರುವ ವಿವಿಧ ಮಠಗಳ ಮಠಾಧೀಶರುಗಳು ಹಾಗೂ ಸಂಜೆಯ ವೇಳೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಶ್ರಮಕ್ಕೆ ಆಗಮಿಸಿ ಕಲ್ಲಯ್ಯಜ್ಜನವರೊಂದಿಗೆ ಚರ್ಚಿಸಿ ನಾವು ನಿಮ್ಮೊಟ್ಟಿಗೆ ಇರುತ್ತೇವೆ ಎಂದು ತಿಳಿಸಿ ಹೋಗಿದ್ದಾರೆ. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡಿ ಶ್ರೀಗಳಿಗೆ ಭದ್ರತೆ ನೀಡಬೇಕು, ನಾವು ಅವರೊಟ್ಟಿಗೆ ಇದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ.

ಗದಗ, ಬಳ್ಳಾರಿ ಸೇರಿದಂತೆ ಬೇರೆ ಜಿಲ್ಲೆಗಳಿಂದ ಭಕ್ತರು ಆಶ್ರಮಕ್ಕೆ ಆಗಮಿಸಿ, ಕಲ್ಲಯ್ಯಜ್ಜನವರನ್ನು ಸಂತೈಸಿ ನಾವು ನಿಮ್ಮೊಟ್ಟಿಗೆ ಇದ್ದೇವೆ ಎಂದು ತಿಳಿಸಿದ್ದಾರೆ. ಕಲ್ಲಯ್ಯಜ್ಜನವರು ಏನು ಹೇಳಬೇಕು ಎಲ್ಲವನ್ನು ಬುಧವಾರವೇ ಹೇಳಿದ್ದಾರೆ ಎಂದು ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜಶಾಸ್ತ್ರಿ ಎಂ. ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕರ ಪಾವತಿ ಒಟಿಎಸ್‌ಗೆ ಬೆಂಗಳೂರಿಗೆ ನಿಯೋಗ
ವೃದ್ಧನ ಅನುಮಾನಾಸ್ಪದ ಸಾವು, ಸಮಾಧಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ