ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸಂಘಕ್ಕೆ ಒಟ್ಟು ₹194.24 ಕೋಟಿ ಪಂಪಸೆಟ್ ಸಹಾಯಧನದ ಮೊತ್ತ ಬಾಕಿಯಿದ್ದು, ಈ ಪೈಕಿ ₹93.24 ಕೋಟಿಗಳನ್ನು ರೈಟ್ ಆಫ್ ಮಾಡಿದ್ದರಿಂದ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯವರು ವಿದ್ಯುತ್ ಖರೀದಿ ಬಾಕಿ ಮೊತ್ತದ ಮೇಲೆ ಜನವರಿ 2025ರ ಅಂತ್ಯದವರೆಗೆ ₹194.38 ಕೋಟಿ ಬಡ್ಡಿ ಆಕರಿಸಿದ್ದರಿಂದ ಸಂಘಕ್ಕೆ ಆರ್ಥಿಕ ಹೊರೆಯಾದ ಒಟ್ಟು ₹287.62 ಕೋಟಿಗಳನ್ನು ಸಹಾಯಧನವಾಗಿ ಬಿಡುಗಡೆ ಮಾಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.ಸಂಘಕ್ಕೆ ಆದಾಯ ಸ್ವೀಕೃತಿಗಿಂತ ವಿದ್ಯುತ್ ಸರಬರಾಜು ವೆಚ್ಚವು ಅಧಿಕವಾಗಿದೆ. ಆದ್ದರಿಂದ ಪ್ರತಿ ಯೂನಿಟ್‌ಗೆ ವಿದ್ಯುತ ದರ ಹೆಚ್ಚಳ ಮಾಡುವ ಅನಿವಾರ್ಯತೆ ಎದುರಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳ ಹಿನ್ನಲೆಯಲ್ಲಿ ಒಎಲ್‌ಪಿ ರಿಲೆ ತೆರವುಗೊಳಿಸಿ ಈ ಹಿಂದಿನಂತೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ತಡೆರಹಿತ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಲಾಯಿತು.ಸಂಘದ ಕಾರ್ಯವ್ಯಾಪ್ತಿಯ ಐಪಿ ಲೈನ್ ಮೇಲೆ ಬರುವ ಸುಮಾರು 13,500 ತೋಟದ ಮನೆಗಳಿಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲು ರೂಪಿಸಿರುವ ₹44.18 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ನೀಡಬೇಕು. ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈ ಮಾದರಿ ಯೋಜನೆ ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ನಮ್ಮ ವಿದ್ಯುತ್ ಸಂಘದ ಕಾರ್ಯವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಘದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.ಕೆಇಆರ್‌ಸಿ ಸದಸ್ಯರಾದ ಎಚ್.ಕೆ.ಜಗದೀಶ್, ಜಾವೀದ ಅಖ್ತರ್, ನಿರ್ದೇಶಕ ಸಫಿವುಲ್ಲಾಖಾನ್, ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪಾ, ಉಪನಿರ್ದೇಶಕ ಮುಜಮಿಲಾಖಾನ್, ಸಂಘದ ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರಾದ ಕುನಾಲ್ ಪಾಟೀಲ, ಮಹಾದೇವ ಪಟೋಳಿ, ರವೀಂದ್ರ ಹಿಡಕಲ್, ಕೆ.ಕೆ.ಬೆನಚಿನಮರಡಿ, ಸೋಮಲಿಂಗ ಪಾಟೀಲ, ರವೀಂದ್ರ ಅಸೂದೆ, ಅಶೋಕ ಚಂದಪ್ಪಗೋಳ, ರಮೇಶ ಕುಲಕರ್ಣಿ, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.ಸ್ಥಾನಿಕ ಎಂಜನೀಯರ್ ನೇಮಿನಾಥ ಖೆಮಲಾಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ್ಯಾನೇಜರ್ ಡಿ.ಎಸ್.ನಾಯಿಕ ಸ್ವಾಗತಿಸಿದರು. ಎಸ್.ಎನ್.ಹಿರೇಮಠ ನಿರೂಪಿಸಿದರು. ಎನ್.ಎಸ್.ಸರದೇಸಾಯಿ ವಂದಿಸಿದರು.