ಶಿರಸಿ: ದೇವರ ಅನುಗ್ರಹ ಮತ್ತು ಹಿಂದಿನ ಪುಣ್ಯದಿಂದ ಮಾನವ ಶರೀರ ನಮಗೆ ಬಂದಿದೆ. ಈ ಮಾನವ ಶರೀರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಚಾತುರ್ಮಾಸ್ಯ ನಿಮಿತ್ತ ಸೇವೆ ಸಲ್ಲಿಸಿದ ಇಸಳೂರು ಸೀಮಾ ಶಿಷ್ಯರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಮನುಷ್ಯ ಶರೀರ ಪಡೆದುಕೊಳ್ಳಬೇಕಾದರೆ ಅನೇಕ ಪುಣ್ಯ ಕೊಟ್ಟು ತೆಗೆದುಕೊಂಡಾಗಿದೆ. ಮನುಷ್ಯ ಶರೀರ ಬಂದಿರುವುದು ದೊಡ್ಡದಾದ ಸಂಸಾರವೆಂಬ ಸಮುದ್ರವನ್ನು ಮಾನವ ಶರೀರವೆಂಬ ನೌಕೆಯಿಂದ ದಾಟುವುದಕ್ಕೋಸ್ಕರ. ಆದರೆ, ಈ ಶರೀರವೆಂಬ ನೌಕೆ ಶಾಶ್ವತವಲ್ಲ. ತುಂಬ ಗಟ್ಟಿಯೂ ಅಲ್ಲ. ಎಷ್ಟು ಹೊತ್ತಿಗೆ ಹೇಗೆ ಬಿದ್ದೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದ್ದರಿಂದ ಬೇಗ ನಿನ್ನ ಗುರಿ ಸಾಧಿಸಬೇಕು ಎಂಬ ಶ್ಲೋಕ ವಿವರಿಸಿ ಹೇಳಿದರು.
೮೦ಲಕ್ಷಕ್ಕೂ ಹೆಚ್ಚು ಜೀವ ಪ್ರಭೇದಗಳು ಈ ಬ್ರಹ್ಮಾಂಡದಲ್ಲಿ ಇವೆ. ಆ ಎಲ್ಲ ಜೀವ ಪ್ರಕಾರಗಳಲ್ಲಿ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಉಳಿದ ಜೀವಿಗಳಿಗೆ ಆಧ್ಯಾತ್ಮ ಸಾಧನೆ ಸಾಧ್ಯವೇ ಇಲ್ಲ. ಮನುಷ್ಯರಿಗೆ ಮಾತ್ರ ಅದು ಸಾಧ್ಯ. ಉಳಿದ ಕೆಲವು ಜೀವಿಗಳು ಭಗವಂತನ ಭಕ್ತರಾಗಿರುವುದು ಪುರಾಣದ ಕಥೆಗಳಲ್ಲಿ ಬರುತ್ತವೆ ಆದರೆ ಅಂತಹ ಜೀವಿಗಳು ಬಹಳ ಕಡಿಮೆ. ಅವರ ಹಿನ್ನೆಲೆಗಳು ಬೇರೆಯೇ ಆಗಿರುತ್ತದೆ. ಆದರೆ ಅಂತಹ ವ್ಯಕ್ತಿಗಳು ವಿರಳ. ಕೋಟಿ ಕೋಟಿ ಜೀವಿಗಳ ಮಧ್ಯೆ ಬೆರಳೆಣಿಯಷ್ಟು ಇರುತ್ತವೆ. ಸಾಮಾನ್ಯವಾಗಿ ಮನುಷ್ಯ ಜನ್ಮಕ್ಕೆ ಮಹತ್ವ. ಮನುಷ್ಯ ಜನ್ಮದಲ್ಲಿ ಸಾಧನೆಗೆ ಬೇಕಾದ ಎಲ್ಲ ಅನುಕೂಲತೆಗಳು ಇವೆ ಎಂದರು.ದುರ್ಲಭವಾದ ಮನುಷ್ಯ ಜನ್ಮವನ್ನು ತುಂಬ ಪುಣ್ಯ ಕೊಟ್ಟು ತೆಗೆದುಕೊಂಡಿದ್ದೇವೆ. ಆದ್ದರಿಂದಲೇ ಇದಕ್ಕೆ ಬಹಳ ಮಹತ್ವ. ಸಂಸಾರ ಸಾಗರ ದಾಟಲು ನಾವು ಈ ಶರೀರವೆಂಬ ನೌಕೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಾಧನೆಗೆ ಬೇಗ ಇಳಿಯಬೇಕು. ನಮ್ಮ ಸಾಧನೆ, ಬುದ್ಧಿವಂತಿಕೆಯಿಂದ ಗಟ್ಟಿ ಮಾಡಬೇಕು, ಬೇಗ ಮಾಡಬೇಕು. ಇದರಿಂದ ಸಂಸಾರವೆಂಬ ಸಾಗರ ದಾಟಲು ಸಾಧ್ಯ ಎಂದರು.
ದೇವರಲ್ಲಿ ಭಕ್ತಿ, ಕರ್ಮಯೋಗ, ರಾಜಯೋಗ ಮೂಲಕ ಸರಿಯಾಗಿ ಸಾಧನೆಯಲ್ಲಿ ತೊಡಗಬೇಕು. ಆಧ್ಯಾತ್ಮಿಕ ಸಾಧನೆಗೆ ಅನೇಕ ಸುಲಭ ಉಪಾಯಗಳು ಇವೆ. ಇವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು. ತುಂಬಾ ಎಚ್ಚರಿಕೆಯಿಂದ ಬೇಗ ಈ ಎಲ್ಲ ಮಾರ್ಗ ಅನುಸರಿಸುವ ಮೂಲಕ ಆಧ್ಯಾತ್ಮಿಕ ಸಾಧನೆಯಲ್ಲಿ ದುರ್ಲಭವಾದ ಮನುಷ್ಯ ಶರೀರ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿದ್ವಯರ ಚಾತುರ್ಮಾಸ್ಯದ ಸೇವೆಯನ್ನು ಇಸಳೂರು ಸೀಮಾ ಪರಿಷತ್ತಿನ ಶಿಷ್ಯರು ಸಲ್ಲಿಸಿದರು. ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.
ಈ ವೇಳೆ ಸತ್ಯನಾರಾಯಣ ಹೆಗಡೆ, ಪ್ರಸನ್ನ ಹೆಗಡೆ, ಆರ್.ಎಸ್. ಹೆಗಡೆ ಇದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ೯೫ ಕ್ಕೂ ಹೆಚ್ಚು ಪ್ರತಿಶತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು. ಮಹನೀಯರು ಗಾಯತ್ರೀ ಜಪಾನುಷ್ಠಾನ, ಮಾತೆಯರು ಶ್ರೀ ಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು.