80 ಕಿಮೀ ಮಾನವ ಸರಪಳಿ ಬಲಿಷ್ಠ ಪ್ರಜಾಪ್ರಭುತ್ವ ಸಂಕೇತ

KannadaprabhaNewsNetwork | Published : Sep 16, 2024 1:56 AM

ಸಾರಾಂಶ

ನ್ಯಾಮತಿ ಗಡಿಯಿಂದ ರಾಣೇಬೆನ್ನೂರು ಗಡಿವರೆಗೆ 80 ಕಿಮೀ ಉದ್ದದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಸಂಪನ್ನ

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವಸಂಸ್ಥೆ ನಿರ್ಣಯದಂತೆ ಪ್ರತಿ ವರ್ಷ ಸೆ.15ರಂದು ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 80 ಕಿ.ಮೀ.ನಷ್ಟು ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ 85 ಸಾವಿರಕ್ಕೂ ಅಧಿಕ ಜನರು ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂಬುದನ್ನು ಸಾರಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಹರಿಹರ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನ್ಯಾಮತಿ ಗಡಿಯಿಂದ 10 ಗ್ರಾ.ಪಂ.ಗಳ ವ್ಯಾಪ್ತಿಯ 25 ಗ್ರಾಮಗಳು, 2 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸೇರಿದಂತೆ ರಾಣೇಬೆನ್ನೂರು ಗಡಿವರೆಗೆ 80 ಕಿಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಅವರು ಮಾತನಾಡಿದರು.

ಧ್ವನಿ ಇಲ್ಲದವರಿಗೆ ಧ್ವನಿ:

ಪ್ರಸಕ್ತ ಸಾಲಿನಲ್ಲಿ ಕೃತಕ ಬುದ್ಧಿಮತ್ತೆ ಉತ್ತಮ ಸರ್ಕಾರದ ಉಪಕರಣವೆಂಬ ಧ್ಯೇಯವಾಕ್ಯದಡಿ ಆಚರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 85 ಸಾವಿರಕ್ಕೂ ಅಧಿಕ ಜನರು ಸುಮಾರು 80 ಕಿ.ಮೀ.ನಷ್ಟು ಬೃಹತ್ ಮಾನವ ಸರಪಳಿ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂಬುದನ್ನು ಜನರು ಸಾಬೀತುಪಡಿಸಿದ್ದಾರೆ. ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಹಾಗೂ ಎಲ್ಲಾ ಮಾನವ ಘನತೆ ಕಾಪಾಡುವುದಾಗಿದೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲ. ಸ್ವಾತಂತ್ರ್ಯ ಮತ್ತು ಅವಕಾಶಗಳ ಮೂರ್ತರೂಪ. ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತದೆ ಎಂದು ಅವರು ಹೇಳಿದರು.

ನಾಗರಿಕರ ಪಾತ್ರ ಬಹುಮುಖ್ಯ:

ಜಾಗತಿಕವಾಗಿ ವಿಶ್ಲೇಷಿಸಿದಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆಯೋ ಎನಿಸುತ್ತದೆ. ಈ ನಿಟ್ಟಿನಲ್ಲಿ ಜನರು ನಿರಂತರ ಜಾಗರೂಕತೆ, ಪೋಷಣೆ ಮತ್ತು ರಕ್ಷಣೆ ಮಾಡಬೇಕಾಗುತ್ತದೆ. ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವನ್ನುಂಟು ಮಾಡುತ್ತವೆ. ಜನರು ಮತದಾನದ ಮೂಲಕ ತಮ್ಮ ಪ್ರಭುತ್ವತೆ ಮೆರೆಯಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸಂಸ್ಥೆಗಳ ಜವಾಬ್ದಾರಿ ಜೊತೆಗೆ ನಾಗರೀಕರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.

ಸಂವಿಧಾನ ಪೀಠಿಕೆ ಓದಿದ ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಪ್ರಾಂತ್ಯಗಳನ್ನು ಹೊಂದಿದ್ದರೂ ಪ್ರಜಾಪ್ರಭುತ್ವದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಶಸ್ಸನ್ನು ಸಾಧಿಸಿ ಅಭಿವೃದ್ಧಿಯಲ್ಲಿ ಶ್ರೀಮಂತ ದೇಶಗಳೊಂದಿಗೆ ಸ್ಪರ್ಧೆಯಲ್ಲಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಡೀ ಜಗತ್ತೇ ಕುತೂಹಲ, ಅಭಿಮಾನದಿಂದ ನೋಡುತ್ತಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಸಿದ್ಧಗಂಗಾ ಶಾಲೆ ಡಾ. ಡಿ.ಎಸ್. ಜಯಂತ್, ವಿವಿಧ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳು ಇದ್ದರು.

ಶಿವಮೊಗ್ಗ ಗಡಿ ಗ್ರಾಮ ನ್ಯಾಮತಿ ತಾಲೂಕಿನ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ತಾಲೂಕಿನ ಹಾವೇರಿ ಜಿಲ್ಲೆ ಗಡಿ ಗ್ರಾಮದವರೆಗೆ 80 ಕಿ.ಮೀ. ಅಂತರದಲ್ಲಿ 85 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿದ್ದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ವಿವಿಧ ವೇಷಭೂಷಣಗಳಲ್ಲಿ ಭಾಗಿಯಾಗಿದ್ದರು. ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಕಲಾವಿದರು, ಸಂಘ-ಸಂಸ್ಥೆ, ಸರ್ಕಾರಿ ನೌಕರರು, ಸಾರ್ವಜನಿಕರು, ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಮಂದಿ ರಸ್ತೆಯುದ್ದಕ್ಕೂ ಎಡಬದಿ ಮಾನವ ಸರಪಳಿ ನಿರ್ಮಾಣ ಮಾಡಿ ಸಂವಿಧಾನ ಪೀಠಿಕೆ ವಾಚಿಸಿದರು. ಹರಿಹರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ಧಗಂಗಾ ಶಾಲೆ ವಿದ್ಯಾರ್ಥಿಗಳು ವಿನೂತನವಾಗಿ ಭಾರತ ಭೂಪಟ ರಚನೆ ಮಾಡಿದರು.

Share this article