ಮೊಬೈಲ್ ಕ್ರಾಂತಿಯಿಂದ ಮಾನವ ಸಂಬಂಧಗಳು ಮಾಯ: ಕೊಟ್ಟೂರು ಮರಿ ಸ್ವಾಮೀಜಿ

KannadaprabhaNewsNetwork |  
Published : Sep 15, 2025, 01:01 AM IST
ಹೊಸಪೇಟೆ ನಗರದ ಚರ್ಚ್ ಸಭಾಂಗಣದಲ್ಲಿ ನಡೆದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಕ್ರಾಂತಿಯಿಂದಾಗಿ ಮಾನವ ಸಂಬಂಧಗಳು ಮಾಯವಾಗುತ್ತಿವೆ.

ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಕ್ರಾಂತಿಯಿಂದಾಗಿ ಮಾನವ ಸಂಬಂಧಗಳು ಮಾಯವಾಗುತ್ತಿವೆ ಎಂದು ಸ್ಥಳೀಯ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಶ್ರೀ ಕೊಟ್ಟೂರು ಮರಿ ಸ್ವಾಮೀಜಿ ನುಡಿದರು.

ನಗರದ ಚರ್ಚ್‌ ಸಭಾಂಗಣದಲ್ಲಿ ಸ್ಥಳೀಯ ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್‌ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ 186ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಆವರು, ಛಾಯಾಗ್ರಹಣ ಎಂಬುದು ಒಂದು ಸುಂದರ ಪ್ರಪಂಚ. ಇದು ಹಲವರಿಗೆ ಬದುಕು ಕಟ್ಟಿಕೊಟ್ಟಿದೆ. ಹಲವರಿಗೆ ಹೆಸರು ತಂದು ಕೊಟ್ಟಿದೆ. ಇದರ ಮೂಲಕ ಸುಂದರ ಬದುಕು ಕಟ್ಟಿಕೊಳ್ಳುವ ಕೆಲಸವನ್ನು ಛಾಯಾಗ್ರಾಹಕರು ಮಾಡಬೇಕು ಎಂದರು.

ಹಿಂದಿನ ಕಾಲದ ಕಪ್ಪು-ಬಿಳುಪು ಫೋಟೋಗಳಿಗೆ ಒಂದು ಬೆಲೆ ಇತ್ತು. ಆನಂತರ ದಿನದಲ್ಲಿ ಆಧುನೀಕರಣದ ಭಾಗವಾಗಿ ಮೊಬೈಲ್‌ಗಳು ಬಂದವು. ಈ ಮೊಬೈಲ್ ಕ್ರಾಂತಿಯಿಂದಾಗಿ ಮನುಕುಲ ಅಳಿವಿನತ್ತ ಸಾಗುತ್ತಿದೆ. ಮುನುಷ್ಯರಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿ, ಯಾಂತ್ರಿಕತೆ ನೆಲೆಸಿದೆ. ಮನುಷ್ಯರಿಗಿಂತ ನಾವು ಇಂದು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ಕುಟುಂಬ ವ್ಯವಸ್ಥೆ ಹಳ್ಳ ಹಿಡಿದಿದೆ ಎಂದರು.

ಇಳಕಲ್ಲಿನ ಜನಾಬ್ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಆಧುನೀಕರಣದ ಫಲವಾಗಿ ಛಾಯಾಗ್ರಹಣ ಹಾಗೂ ಛಾಯಾಗ್ರಾಹಕರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಹಾಗೂ ಸಮಾಜ ಮಾಡಬೇಕಾಗಿದೆ ಎಂದರು.

ಕಾರ್ಮಿಕ ಇಲಾಖೆ ಅಧಿಕಾರಿ ಸೂರ್ಯಪ್ಪ ಐ. ಡೊಂಬರ ಮತ್ತೂರ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಛಾಯಾಗ್ರಾಹಕರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಛಾಯಾಗ್ರಾಹಕರಿಗೆ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಅಪಘಾತದಿಂದ ಮೃತಪಟ್ಟರೆ ಒಂದು ಲಕ್ಷ ರು. ಪರಿಹಾರ, ಅಪಘಾತದಲ್ಲಿ ತೀವ್ರ ಗಾಯಗೊಂಡರೆ ₹50 ಸಾವಿರದ ವರೆಗೆ ಚಿಕಿತ್ಸಾ ವೆಚ್ಚ, ಸಹಜ ಸಾವು ಸಂಭವಿಸಿದರೆ ಅವರ ಕುಟುಂಬದವರಿಗೆ ಅಂತ್ಯಕ್ರಿಯೆಗೆ ₹10 ಸಾವಿರ ನೀಡಲಾಗುವುದು ಎಂದರು.

ಡಿವೈಎಸ್ಪಿ ಡಾ. ತಳವಾರ ಮಂಜುನಾಥ, ಪವಿತ್ರ ಹೃದಯ ದೇವಾಲಯದ ಫಾದರ್ ಭಗವಂತರಾಜ್, ಅಂಚೆ ಇಲಾಖೆ ಅಧಿಕಾರಿ ಬಿ. ರಾಜಪ್ಪ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಗೌರವಾಧ್ಯಕ್ಷ ತೈಯಬ್ ಹುಸೇನ್, ಅಧ್ಯಕ್ಷ ಎ.ಎಂ. ಮಲ್ಲಿಕಾರ್ಜುನ ಗೌಡ ವಹಿಸಿದ್ದರು. ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು, ಛಾಯಾಗ್ರಾಹಕರು ಭಾಗವಹಿಸಿದ್ದರು.

ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಬೆಳಗ್ಗೆ ಹಂಪಿಯಿಂದ ಜ್ಯೋತಿ ತರಲಾಯಿತು. ಆನಂತರ ಛಾಯಾಚಿತ್ರ ಪ್ರದರ್ಶನ, ನಿಧನ ಹೊಂದಿದ ಛಾಯಾಗ್ರಾಹಕ ಕುಟುಂಬದವರಿಗೆ ಸಾಂತ್ವನ, ಸನ್ಮಾನ, ಸಂಗೀತ ಕಾರ್ಯಕ್ರಮ, ಜಿಲ್ಲೆಯ ತಾಲೂಕು ಘಟಕದ ಅಧ್ಯಕ್ಷರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಸಂಜಯ್ ಕುಮಾರ್ ಸ್ವಾಗತಿಸಿದರು. ಸಂದೀಪ್ ನಾಯ್ಡು ಪ್ರಾಸ್ತಾವಿಕ ಮಾತುಗಳನ್ನಾಡಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ