ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂಬೈ ಮೂಲದ ಯಾಸಿನ್ ಮುಕ್ಬುಲ್‌ನನ್ನು ಕಾನೂನುಬಾಹಿರವಾಗಿ ಠಾಣೆಯಲ್ಲಿಟ್ಟಿದ್ದ ಆರೋಪ ಬಂದಿದ್ದು, ಠಾಣೆ ಮೇಲೆ ಶುಕ್ರವಾರ ಸಂಜೆ ಎಸ್‌ಎಚ್‌ಆರ್‌ಸಿ ಪೊಲೀಸ್ ವಿಭಾಗದ ಡಿವೈಎಸ್ಪಿ ಸುಧೀರ್ ಹೆಗಡೆ ನೇತೃತ್ವದ ತಂಡವು ದಾಳಿ ನಡೆಸಿತು. ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಠಾಣೆಯಲ್ಲಿ ಯಾಸಿನ್‌ನನ್ನು ಅಕ್ರಮ ಬಂಧದಲ್ಲಿಟ್ಟಿರುವ ಸಂಗತಿ ಖಚಿತವಾದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಂಬರೀಷ್ ಸೇರಿ ಇತರರ ವಿರುದ್ಧ ಎಸ್‌ಎಚ್‌ಆರ್‌ಸಿ ಪ್ರಕರಣ ದಾಖಲಿಸಿದೆ.
ವಿಮಾನದಲ್ಲಿ ಕರೆತಂದಿದ್ರು?: 2023ರಲ್ಲಿ ಮನೆಗಳ್ಳತನ ಪ್ರಕರಣ ಸಂಬಂಧ ಯಾಸಿನ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ನಗರವನ್ನು ತೊರೆದು ಮುಂಬೈಗೆ ಮರಳಿದ್ದ. ಈ ಪ್ರಕರಣದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಹೊರಡಿಸಿದ್ದ ವಾರೆಂಟ್ ಆಧಾರದ ಮೇಲೆ ಮುಂಬೈಗೆ ತೆರಳಿದ ಅಮೃತಹಳ್ಳಿ ಠಾಣೆ ಪೊಲೀಸರು, ಫೆ.1ರಂದು ಯಾಸಿನ್‌ನನ್ನು ವಶಕ್ಕೆ ಪಡೆದು ವಿಮಾನದಲ್ಲಿ ನಗರಕ್ಕೆ ಕರೆತಂದಿದ್ದರು.ಆದರೆ ನ್ಯಾಯಾಲಯಕ್ಕೆ ಹಾಜರುಪಡಿಸದೆ ಯಾಸಿನ್‌ನನ್ನು ಠಾಣೆಯಲ್ಲೇ ಅಕ್ರಮ ಬಂಧನದಲ್ಲಿಟ್ಟಿದ್ದರು. ಈ ಬಗ್ಗೆ ಎಸ್‌ಎಚ್‌ಆರ್‌ಸಿಗೆ ಯಾಸಿನ್ ಕುಟುಂಬದವರು ದೂರು ನೀಡಿದರು. ದೂರಿನ ಅನ್ವಯ ಠಾಣೆ ಮೇಲೆ ಶುಕ್ರವಾರ ಸಂಜೆ 6 ಗಂಟೆಗೆ ದಾಳಿ ನಡೆಸಿದ ಡಿವೈಎಸ್ಪಿ ಸುಧೀರ್ ಹೆಗಡೆ ಅವರು, ಯಾಸಿನ್ ವಶಕ್ಕೆ ಪಡೆದಿರುವ ಬಗ್ಗೆ ಠಾಣೆಯಲ್ಲಿ ದಾಖಲೆಗಳನ್ನು ಪರಿಶೀಲಸಿದಾಗ ಪೊಲೀಸರ ಕರ್ತವ್ಯಲೋಪ ಪತ್ತೆಯಾಗಿದೆ. ಆರೋಪಿತನ ಬಗ್ಗೆ ಠಾಣೆ ಡೈರಿ ಸೇರಿದಂತೆ ಇತರೆ ದಾಖಲೆಗಳಲ್ಲಿ ಸಹ ಉಲ್ಲೇಖಿಸಿಲ್ಲ. ಹೀಗಾಗಿ ಅಕ್ರಮ ಬಂಧನದಲ್ಲಿಟ್ಟು ಆತನಿಗೆ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.ಡಿಸಿಪಿಗೆ ಮಾಹಿತಿ ನೀಡದ ಇನ್‌ಸ್ಪೆಕ್ಟರ್?: ಆರೋಪಿಯನ್ನು ಬಂಧಿಸಲು ಹೊರರಾಜ್ಯಕ್ಕೆ ತೆರಳುವ ಮುನ್ನ ಆಯಾ ವಿಭಾಗದ ಡಿಸಿಪಿ ಅವರಿಂದ ಪೊಲೀಸರು ಪೂರ್ವಾನುಮತಿ ಪಡೆಯಬೇಕು. ಆದರೆ ಯಾಸಿನ್ ಬಂಧನಕ್ಕೆ ತೆರಳಿದ್ದಾಗ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರಿಂದ ಅಮೃತಹಳ್ಳಿ ಪಿಐ ಅಂಬರೀಷ್ ಅನುಮತಿ ಪಡೆದಿರಲಿಲ್ಲ ಎಂದು ಆರೋಪಿಸಲಾಗಿದೆ.
ವಿಚಾರಣೆಗೆ ಬರುವಂತೆ ನೋಟಿಸ್: ಅಕ್ರಮ ಬಂಧನ ಪ್ರಕರಣ ಸಂಬಂಧ ಫೆ.13ರ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪಿಐ ಅಂಬರೀಷ್ ಸೇರಿದಂತೆ ಅಮೃತಹಳ್ಳಿ ಪೊಲೀಸರಿಗೆ ಎಸ್‌ಎಚ್‌ಆರ್‌ಸಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಆರೋಪಿತ ಪೊಲೀಸರ ವಿಚಾರಣೆ ಬಳಿಕ ಆಯೋಗದ ಮುಖ್ಯಸ್ಥರಿಗೆ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ.