ಕನ್ನಡಪ್ರಭ ವಾರ್ತೆ ಮೈಸೂರು
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತಾಶ್ರಯದಲ್ಲಿ ಊಟಿಯ ತೀಟಕಲ್ ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರವನ್ನು ಉದ್ಛಾಟಿಸಿ ಅವರು ಮಾತನಾಡಿದರು.
ನಮ್ಮೊಳಗಿನ ಮಾನವೀಯತೆ ಜಾಗೃತಗೊಳ್ಳಲು ಜೀವನೋತ್ಸಾಹ ಶಿಬಿರಗಳು ಅಗತ್ಯ. ನಾವು ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸಲು ಸದ್ಭಾವನೆ ಮುಖ್ಯ. ಪದವಿ, ಪುರಸ್ಕಾರಗಳಿಗಿಂತ ನಿಸ್ವಾರ್ಥ ಸೇವೆಯೇ ನಿಜವಾದ ಸಾಧನೆಯಾಗಿದೆ. ಆಧುನಿಕ ಯುಗದಲ್ಲಿ ಜನರು ಜೀವನೋತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳಿಂದ ಉತ್ಸಾಹ ತುಂಬಲು ಸಾಧ್ಯ. ಸುತ್ತೂರು ಶ್ರೀಗಳವರು ದೂರದೃಷ್ಟಿಯಿಂದ ಶಿಬಿರವನ್ನು ಆಯೋಜಿಸಿರುವುದು ನಿಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.ಕೆ.ಸಿ. ವಿರೂಪಾಕ್ಷ ಮಾತನಾಡಿ, ನಮ್ಮ ಬದುಕು ಪ್ರಾಮಾಣಿಕವಾಗಿರಬೇಕು. ಮಾಡುವ ಕೆಲಸಗಳಲ್ಲಿ ಆಸಕ್ತಿ ಮತ್ತು ಶ್ರದ್ಧೆ ಇರಬೇಕು. ವೈಯಕ್ತಿಕ ಬದುಕು ಆದರ್ಶವಾಗಿದ್ದು, ಎಲ್ಲರನ್ನೂ ಪ್ರೀತಿಸುವ ಗುಣವನ್ನು ಮತ್ತು ಸಹಜ ಬದುಕನ್ನು ರೂಢಿಸಿಕೊಳ್ಳಲು ಶರಣರ ಚಿಂತನೆಗಳು ಸ್ಫೂರ್ತಿಯಾಗಿವೆ ಎಂದು ತಿಳಿಸಿದರು.ಭಾರತೀಯ ಸೇನೆಯ ಸೇನಾ ಪದಕ ಪುರಸ್ಕೃತ ಕರ್ನಲ್ ಪಿ.ಎಲ್. ರಾಘವೇಂದ್ರ ಮಾತನಾಡಿ, ಇಂದಿನ ಜನರ ಮನಸ್ಥಿತಿ ಚಂಚಲವಾಗುತ್ತಿದೆ. ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಪೋನ್ ಕೊಟ್ಟು ಅವರ ಬೌದ್ಧಿಕತೆಗೆ ವಿಷವನ್ನು ನೀಡಲಾಗುತ್ತಿದೆ. ಮಕ್ಕಳಲ್ಲಿ ತಾಳ್ಮೆ ಕಡಿಮೆಯಾಗುತ್ತಿದ್ದು, ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಳೆಸಬೇಕು. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧ ಗಾಢವಾಗಿದ್ದಲ್ಲಿ ದೈವತ್ವ ಪ್ರಾಪ್ತಿಯಾಗುತ್ತದೆ ಎಂದರು.
ಶಿಕ್ಷಣ ತಜ್ಞರು ಹಾಗೂ ವಾಗ್ಮಿಗಳಾದ ಶ್ರೀ ಮಹೇಶ್ ಮಾಶಾಳರವರು ನಾವು ಕಷ್ಟದ ಸಂದರ್ಭಗಳಲ್ಲಿ, ಕೋಪ ಅಥವಾ ಅಸಮಾಧಾನವನ್ನು ತೋರಿಸಬಾರದು. ಸಮಸ್ಯೆಗಳನ್ನು ಸ್ಥಿರ ಹಾಗೂ ಶಾಂತಿಯುತ ಮನಸ್ಸಿನಿಂದ ಎದುರಿಸಬೇಕು. ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬದುಕುವುದೇ ನಿಜವಾದ ಸಹನಶೀಲತೆ ಎಂದು ತಿಳಿಸಿದರು.
ಶಿಬಿರದಲ್ಲಿ ಮೈಸೂರು, ಬೆಂಗಳೂರು, ಚಾಮರಾಜನಗರ, ತುಮಕೂರು, ಚಕ್ಕಮಗಳೂರು, ಶಿವಮೊಗ್ಗ, ರಾಯಚೂರು, ಬಾಗಲಕೋಟೆ, ಗದಗ, ಬೆಳಗಾವಿ, ಗುಲ್ಬರ್ಗ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಿಂದ 235 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.