ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಪಟ್ಟಣದ ಸಿ.ಎಂ. ರಸ್ತೆಯಲ್ಲಿರುವ ರಾಘವೇಂದ್ರ ಕ್ಲಿನಿಕ್ ನಲ್ಲಿ ರಾಮಯ್ಯ ಎಂಬವರು ಮೃತಪಟ್ಟಿದ್ದು, ಇಲ್ಲಿನ ವೈದ್ಯ ಡಾ.ಎಚ್.ಜಿ. ಶಂಕರ್ ಅವರು ನೀಡಿದ ಚುಚ್ಚುಮದ್ದು ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಮೃತರು ಪಟ್ಟಣದ ಸಮೀಪವಿರುವ ಕಾಳೇನಹಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲೋನಿಯ ನಿವಾಸಿಯಾಗಿದ್ದು, ರಾಮಯ್ಯನ ಪತ್ನಿ ಪಾಪಮ್ಮ ಬೆಳಗ್ಗೆ 10 ರಲ್ಲಿ ಕ್ಲಿನಿಕ್ ಗೆ ಬಂದು ನನ್ನ ಪತಿಗೆ ತುಂಬಾ ಹೊಟ್ಟೆನೋವು ಇರುವುದರಿಂದ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ.ರಾಮಯ್ಯನಿಗೆ ಮೊದಲೇ ಪಾರ್ಶ್ವವಾಯು ಹೊಡೆದಿದೆ ಎಂದು ಹೇಳಿ ಈ ಹಿಂದೆ ಪಡೆದಿದ್ದ ಚಿಕಿತ್ಸೆಯ ಔಷಧಿ ಚೀಟಿ ಮತ್ತು ಮಾತ್ರೆಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದರೂ ವೈದ್ಯರು ಯಾವುದನ್ನು ಪರಿಶೀಲಿಸದೆ ಏಕಾಏಕಿ ಚುಚ್ಚು ಮದ್ದು ನೀಡಿದ್ದರಿಂದ ಮೃತಪಟ್ಟಿದ್ದಾರೆಂದು ರಾಮಯ್ಯನ ಸಂಬಂಧಿಕರು ಮತ್ತು ಅವರ ಪುತ್ರ, ಪುತ್ರಿ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೈದ್ಯರ ವಿರುದ್ದ ದೂರು ದಾಖಲಿಸಿಕೊಂಡು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಮೃತ ರಾಮಯ್ಯ ಸಫಾಯಿ ಕರ್ಮಚಾರಿಯಾಗಿದ್ದು ತುಂಬಾ ಕಡು ಬಡವರಾಗಿರುವುದರಿಂದ ಈತನ ಅಂತ್ಯಕ್ರಿಯೆ ನಡೆಸಲು ಇತರರ ಸಹಾಯ ಪಡೆಯಬೇಕಾಗಿದೆ, ಆದ್ದರಿಂದ ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಜತೆಗೆ ಚಿಕಿತ್ಸೆ ವೇಳೆ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.