ಧರ್ಮಾಚರಣೆಗಳ ಗುರಿಯೇ ಮಾನವ ಕಲ್ಯಾಣ: ರಂಭಾಪುರಿ ಶ್ರೀ

KannadaprabhaNewsNetwork | Published : Jan 9, 2025 12:45 AM

ಸಾರಾಂಶ

ಆಧ್ಯಾತ್ಮ ಜ್ಞಾನ ಹಾಗೂ ಭಾವೈಕ್ಯ ದೇಶದ ಉಸಿರಾಗಿದೆ. ದೇಶ ಉಳಿದರೆ ಧರ್ಮ ಉಳಿಯಲು ಸಾಧ್ಯವಿದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ ದೇಶದಲ್ಲಿ ಹಲವು ಧರ್ಮ ಹಾಗೂ ಆಚರಣೆಗಳಿವೆ. ಅವೆಲ್ಲವುಗಳ ಗುರಿ ಮಾನವ ಕಲ್ಯಾಣವೇ ಆಗಿದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಸಿದ್ಧರಾಮೇಶ್ವರ ನಮ್ಮೂರ ಜಾತ್ರೆ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಬುಧವಾರ ನಡೆದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಆಧ್ಯಾತ್ಮ ಜ್ಞಾನ ಹಾಗೂ ಭಾವೈಕ್ಯ ದೇಶದ ಉಸಿರಾಗಿದೆ. ದೇಶ ಉಳಿದರೆ ಧರ್ಮ ಉಳಿಯಲು ಸಾಧ್ಯವಿದೆ ಎಂದು ತಿಳಿಸಿದರು.ಜಾತಿ, ಧರ್ಮಗಳ ಚೌಕಟ್ಟು ಮೀರಿ ಮಾನವೀಯ ತತ್ವದ ತಳಹದಿ ಮೇಲೆ ಆರೋಗ್ಯಪೂರ್ಣ ಸಮಾಜ ನಿರ್ಮಿಸಬೇಕೆಂಬುದೇ ಜಗದ್ಗುರು ರೇಣುಕಾ ಚಾರ್ಯ ರು ಹಾಗೂ ಜಗಜ್ಯೋತಿ ಬಸವಣ್ಣನವರ ಗುರಿಯಾಗಿತ್ತು. ಈ ದಿಸೆಯಲ್ಲಿ ಮುನ್ನಡೆದು ಶಾಂತಿ, ಸಮಾಧಾನದ ವಾತಾವರಣ ನಿರ್ಮಿಸಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.ದೇಶದಲ್ಲಿ ಸಂಸ್ಕೃತಿ ಹಾಗೂ ಪರಂಪರೆಗೆ ಬಹಳ ಪ್ರಾಮುಖ್ಯ ಇದೆ. ಮಾನವೀಯ ಆದರ್ಶ ಮೌಲ್ಯಗಳ ಮೂಲಕ ಸಮಾಜದಲ್ಲಿ ಸೌಹಾರ್ದ ಬೆಳೆಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.ನಾಡಿನ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆಗಳ ಮೂಲ ಉದ್ದೇಶ ಸಾಮರಸ್ಯ ಹಾಗೂ ಸದ್ಭಾವನೆ ಬೆಳೆಸುವುದಾಗಿದೆ ಎಂದು ಹೇಳಿದರು.12 ವರ್ಷಗಳ ಅವಧಿಯಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರ, ಸದ್ವಿಚಾರಗಳ ಮೂಲಕ ಹಲಬರ್ಗಾ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿದ ಶ್ರೇಯಸ್ಸು ಹಾವಗಿಲಿಂಗೇಶ್ವರ ಶ್ರೀಗಳಿಗೆ ಸಲ್ಲುತ್ತದೆ. ಭಕ್ತ ಸಮುದಾಯ ಅವರ ಆದರ್ಶ ದಾರಿಯಲ್ಲಿ ಸಾಗಿ, ಸದೃಢ, ಸಶಕ್ತ ದೇಶ ಹಾಗೂ ಧರ್ಮವನ್ನು ಕಟ್ಟುವಂತಾಗಲಿ ಎಂದು ಶುಭ ಹಾರೈಸಿ, ಶ್ರೀಗಳಿಗೆ ಆಶೀರ್ವದಿಸಿದರು.ನೇತೃತ್ವ ವಹಿಸಿದ್ದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಭಕ್ತರ ಭಾಗ್ಯ ಬಹಳ ದೊಡ್ಡದಿದೆ. ರಂಭಾಪುರಿ ಜಗದ್ಗುರು ಗಳು ಆಗಮಿಸಿ, ಜಾತ್ರೆ ಹಾಗೂ ತಮ್ಮ ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಸಾನಿಧ್ಯ ವಹಿಸಿರುವುದು ಪೂರ್ವಾರ್ಜಿತ ಪುಣ್ಯದ ಫಲ ಎಂದು ಬಣ್ಣಿಸಿದರು.ಮೆಹಕರದ ರಾಜೇಶ್ವರ ಶಿವಾಚಾರ್ಯ ಸಮಾರಂಭ ಉದ್ಘಾಟಿಸಿದರು. ಹುಡುಗಿ ಹಿರೇಮಠದ ವಿರೂಪಾಕ್ಷ ಶಿವಾಚಾರ್ಯ, ಹಣೆಗಾಂವ್‌ನ ಶಂಕರಲಿಂಗ ಶಿವಾಚಾರ್ಯ ಕೌಳಾಸ ಶಿವಾಚಾರ್ಯ ಸಮ್ಮುಖ ವಹಿಸಿದ್ದರು. ಪ್ರಮುಖರಾದ ಶಾಂತಕುಮಾರ ಪ್ರಭಾ, ಮಲ್ಲಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ, ರಮೇಶ ಪ್ರಭಾ, ಉಮಾಕಾಂತ ಪ್ರಭಾ ಮತ್ತಿತರರು ಇದ್ದರು. ಇದಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಭಕ್ತರು ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ಶಾಸ್ತ್ರೋಕ್ತವಾಗಿ ಮಂಗಲ ಸ್ನಾನ ಮಾಡಿಸಿ, ಹೊಸ ಬಟ್ಟೆ ಸಮರ್ಪಿಸಿದರು.--ಚಿತ್ರ 8ಬಿಡಿಆರ್53:ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಸಿದ್ಧರಾಮೇಶ್ವರ ನಮ್ಮೂರ ಜಾತ್ರೆ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಬುಧವಾರ ನಡೆದ ಧರ್ಮಸಭೆಯನ್ನು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು.--

Share this article