ಚಿಕ್ಕಮಗಳೂರಿನ ಬೈಪಾಸ್ ಸಮೀಪದ ಬಿ.ಎಡ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ ಇನ್ನೊಂದು ಜೀವ ಉಳಿಸುವ ಜೊತೆಗೆ ಶರೀರವನ್ನು ಮಾರಕ ಕಾಯಿಲೆಗಳಿಂದ ತಡೆಗಟ್ಟಲು ಸಾಧ್ಯ ಎಂದು ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯ್‌ಕುಮಾರ್ ಹೇಳಿದರು. ನಗರದ ಬೈಪಾಸ್ ಸಮೀಪದ ಬಿ.ಎಡ್ ಕಾಲೇಜಿನಲ್ಲಿ ಎಂಎಲ್ಎಂಎನ್ ಶಿಕ್ಷಣ ಕಾಲೇಜು, ಲಯನ್ಸ್ ಅಂತಾರಾಷ್ಟ್ರೀಯ ಕ್ಲಬ್ ಹಾಗೂ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನದಿಂದ ಜೀವ ಉಳಿಸುವುದು ಮಾತ್ರವಲ್ಲದೇ ರಕ್ತದಾನಿಗಳಿಗೂ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ, ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾದರೆ ಆರೋಗ್ಯಯುತ ಬದುಕು ನಿಮ್ಮದಾಗಲಿದೆ ಎಂದರು. ಪ್ರಸ್ತುತ ದೃಶ್ಯಮಾಧ್ಯಮಗಳಲ್ಲಿ ಗಮನಿಸುವುದಾದರೆ ಪ್ರಪಂಚದ ಕೆಲವು ದೇಶಗಳು ನೆರೆದೇಶಗಳ ಮೇಲೆ ದಾಳಿ ನಡೆಸಿದ ಪರಿಣಾಮ ಹಲವಾರು ಮುಗ್ದರು ಹಾಗೂ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಬಹುತೇಕರು ಸೂಕ್ತ ಸಮಯಕ್ಕೆ ರಕ್ತ ಸಿಗದೇ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಿದೆ. ಇದನ್ನು ನಿವಾರಿಸುವ ಸಲುವಾಗಿ ಪ್ರಪಂಚದ ರಕ್ತನಿಧಿ ಬ್ಯಾಂಕ್‌ಗಳು ವಿವಿಧ ದೇಶಗಳಲ್ಲಿ ರಕ್ತಕ್ಕಾಗಿ ಬೇಡಿಕೆಯಿಟ್ಟಿವೆ ಎಂದು ಹೇಳಿದರು. ಜೀವ ಉಳಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರು ಮನುಷ್ಯಧರ್ಮ ಪಾಲನೆ ಮಾಡಬೇಕು. ಸಮಯಕ್ಕೆ ಸರಿಯಾಗಿ ರಕ್ತ ಒದಗಿಸುವ ವ್ಯವಸ್ಥೆ ಅಥವಾ ಖುದ್ದಾಗಿ ನೀಡಲು ಮುಂದಾದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ರಕ್ತದಾನ ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು. ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ಮೋಹನ್‌ಕುಮಾರ್ ಮಾತನಾಡಿ, ರಕ್ತವನ್ನು ಕೃತಕವಾಗಿ ಸೃಷ್ಟಿಮಾಡಲು ಅಸಾಧ್ಯವಾದುದರಿಂದ ಅದನ್ನು ಮನುಷ್ಯರಿಂದಲೇ ದಾನವಾಗಿಯೇ ಪಡೆಯಬೇಕು. ರಕ್ತ ದಾನ ಮಹಾದಾನ. ರಕ್ತದಾನ ಮಾಡಿದವರಿಂದ ಜೀವ ಉಳಿಸುವ ಸಾರ್ಥಕತೆಯನ್ನು ಪಡೆಯುತ್ತಾರೆ ಎಂದು ತಿಳಿಸಿದರು. ರಕ್ತದಾನದಿಂದ ತುರ್ತು ಸನ್ನಿವೇಶದಲ್ಲಿ ಹಲವರ ಜೀವ ಉಳಿಸಬಹುದು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಅದೇ ರಕ್ತದಾನಕ್ಕೆ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಯುವಕರು ಅತಿಹೆಚ್ಚು ಸಂಖ್ಯೆ ಯಲ್ಲಿ ರಕ್ತದಾನ ಮಾಡಿದರೆ ಯಾವುದೇ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು. ಎಂಎಲ್ಎಂಎನ್ ಶಿಕ್ಷಣ ಕಾಲೇಜು ಪ್ರಾಂಶುಪಾಲ ಡಾ. ಜಿ.ಎಂ.ಗಣೇಶ್ ಮಾತನಾಡಿ, ಬಿ.ಎಡ್ ಕಾಲೇಜು ಸ್ಥಾಪನೆಯಾಗಿ ಸುಮಾರು 4 ದಶಕಗಳೇ ಕಳದಿವೆ. ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರ ಆಯೋಜಿಸಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಗುಣಾತ್ಮಕ ಕಾರ್ಯ ಕ್ರಮಗಳನ್ನು ರೂಪಿಸುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್, ರಕ್ತದಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಲಯನ್ಸ್ ಮಾಡಿಕೊಂಡು ಬಂದಿದೆ. ಪ್ರಸ್ತುತ ಯುವಕರಲ್ಲಿ ರಕ್ತದಾನಕ್ಕೆ ಪ್ರೇರೇಪಿಸುವ ಮೂಲಕ ಒಟ್ಟು 500 ಯುನಿಟ್ ಸಂಗ್ರಹಿಸಿ ರಕ್ತನಿಧಿ ಕೇಂದ್ರಕ್ಕೆ ಬಳಕೆಗೆ ನೀಡಲು ಶಿಬಿರ ಆಯೋಜಿಸಿ ಮುನ್ನಡೆಸುತ್ತಿದ್ದು ಇದೀಗ 193 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಹೇಳಿದರು. ಇದೇ ವೇಳೆ ರಕ್ತನಿಧಿ ಕೇಂದ್ರದ ಹಿರಿಯ ವೈದ್ಯ ಡಾ. ಮುರುಳಿಧರ್ ರಕ್ತದಾನದಿಂದಾಗುವ ಉಪಯೋಗವನ್ನು ಪ್ರಶಿಕ್ಷಾರ್ಥಿಗಳಿಗೆ ವಿವರಿಸಿದರು. ಬಳಿಕ 41 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ, ವ್ಯವಸ್ಥಾಪಕಿ ಲಕ್ಷ್ಮೀ, ಎಂಎಲ್ಎಂಎನ್ ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ, ಪ್ರಶಿಕ್ಷಣಾರ್ಥಿ ರಮ್ಯ ಎಸ್.ರಾವ್ , ಹರ್ಷಿತಾ, ಡಾ. ಗಣೇಶ್ , ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರುದ್ರಪ್ಪ ಎನ್ ತಳವಾರ್ ಉಪಸ್ಥಿತರಿದ್ದರು. 11 ಕೆಸಿಕೆಎಂ 4 ಚಿಕ್ಕಮಗಳೂರಿನ ಬೈಪಾಸ್ ಸಮೀಪದ ಬಿ.ಎಡ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಡಾ. ಡಿ.ಎಲ್. ವಿಜಯಕುಮಾರ್ ಅವರು ಉದ್ಘಾಟಿಸಿದರು. ಜಿ. ರಮೇಶ್, ಡಾ. ಜೆ.ಪಿ. ಕೃಷ್ಣೇಗೌಡ, ಡಾ. ಮೋಹನ್‌ಕುಮಾರ್ ಇದ್ದಾರೆ.