ರಸ್ತೆಯಲ್ಲೇ ರಾತ್ರಿ ಕಳೆದ ನೂರಾರು ಜನ!

KannadaprabhaNewsNetwork |  
Published : Jun 13, 2025, 02:08 AM IST
ಮಳೆ ಅವಾಂತರ. | Kannada Prabha

ಸಾರಾಂಶ

ಬುಧವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿ 9.30ರಷ್ಟೊತ್ತಿಗೆ ಅಕ್ಷರಶಃ ಉಗ್ರಾವತಾರ ತಾಳಿತ್ತು. ಹಿಂದೆಂದೂ ಕಾಣದಂತಹ ಕುಂಭದ್ರೋಣ ಮಳೆಗೆ ವಾಣಿಜ್ಯನಗರಿ ಸಾಕ್ಷಿಯಾಗಿತ್ತು. ಆರೇ ಗಂಟೆಯಲ್ಲಿ ಸುರಿದ ಮಳೆ ನಗರವನ್ನು ಅಕ್ಷರಶಃ ನಡುಗಿಸಿತ್ತು. ರಸ್ತೆಯೆಂಬುದೇ ಕಾಣಿಸುತ್ತಿರಲಿಲ್ಲ. ಎಲ್ಲಿ ನೋಡಿದರೂ ಬರೀ ನೀರು ನೀರೇ. ಇಡೀ ಊರಿಗೆ ಊರೇ ಹೊಳೆಯಂತೆ ಭಾಸವಾಗುತ್ತಿತ್ತು.

ಹುಬ್ಬಳ್ಳಿ: ರಸ್ತೆಯಲ್ಲೇ ರಾತ್ರಿ ಕಳೆದ ನೂರಾರು ಜನ.., ನೀರಲ್ಲೇ ತೇಲಾಡಿದ ಹತ್ತಾರು ಬೈಕ್‌.., ಮುಂದೆ ಸಾಗದೇ ನಿಂತಲ್ಲೇ ನಿಂತ ಕಾರು, ಬಸ್‌, ಇತರೆ ವಾಹನಗಳು..!

ಇದು ಹುಬ್ಬಳ್ಳಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯ ಆವಾಂತರದ ಬಗ್ಗೆ ಒಂದು ಸಾಲಿನ ವಿವರಣೆ. ಬುಧವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿ 9.30ರಷ್ಟೊತ್ತಿಗೆ ಅಕ್ಷರಶಃ ಉಗ್ರಾವತಾರ ತಾಳಿತ್ತು. ಹಿಂದೆಂದೂ ಕಾಣದಂತಹ ಕುಂಭದ್ರೋಣ ಮಳೆಗೆ ವಾಣಿಜ್ಯನಗರಿ ಸಾಕ್ಷಿಯಾಗಿತ್ತು. ಆರೇ ಗಂಟೆಯಲ್ಲಿ ಸುರಿದ ಮಳೆ ನಗರವನ್ನು ಅಕ್ಷರಶಃ ನಡುಗಿಸಿತ್ತು. ರಸ್ತೆಯೆಂಬುದೇ ಕಾಣಿಸುತ್ತಿರಲಿಲ್ಲ. ಎಲ್ಲಿ ನೋಡಿದರೂ ಬರೀ ನೀರು ನೀರೇ. ಇಡೀ ಊರಿಗೆ ಊರೇ ಹೊಳೆಯಂತೆ ಭಾಸವಾಗುತ್ತಿತ್ತು.

ನೌಕರಿ ಮುಗಿಸಿ ಮನೆಯತ್ತ ಹೆಜ್ಜೆ ಹಾಕೋಣ ಎಂದುಕೊಂಡು ಹೊರಟ್ಟಿದ್ದ ಜನರೆಲ್ಲ ರೋಡ್‌ನಲ್ಲೇ ಲಾಕ್‌ ಆಗಿದ್ದರು. ದ್ವಿಚಕ್ರವಾಹನಗಳು ಮುಂದೆ ಹೋಗಲು ಸಾಧ್ಯವಾಗದೇ ನಡು ರಸ್ತೆಯಲ್ಲೇ ನಿಂತಿದ್ದವು. ಕೆಲವೆಡೆಯಂತೂ ದ್ವಿಚಕ್ರವಾಹನ ಸವಾರರು ನೀರಲ್ಲೇ ಬಿದ್ದು ಗಾಯಗೊಂಡಿದ್ದರೆ, ದ್ವಿಚಕ್ರವಾಹನಗಳು ಮಾಲೀಕರನ್ನು ಬಿಟ್ಟು ತೇಲಾಡುತ್ತಾ ಮುಂದೆ ಹೋಗುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು.

ಮುಂದೆ ಹಾಗೋ ಹೀಗೋ ಮಾಡಿ ಕೊಂಚ ದೂರ ಹೋಗಿ ಯಾವುದಾದರೂ ಅಂಗಡಿ ಮುಗ್ಗಟ್ಟುಗಳ ಎದುರಿನ ಕಟ್ಟೆಯ ಮೇಲೆ ಹತ್ತಿ ನಿಂತು ಮಳೆ ನಿಲ್ಲುವ ವರೆಗೂ ಕಾಯುವುದು ಅನಿವಾರ್ಯವಾಗಿತ್ತು. ಕೆಲವರು ರಾತ್ರಿಯೆಲ್ಲ ಅಂಗಡಿ ಮುಗ್ಗಟ್ಟುಗಳ ಕಟ್ಟೆ ಮೇಲೆ ಕಳೆದು ಬೆಳಗಿನ ಜಾವ ಮನೆಯತ್ತ ಹೆಜ್ಜೆ ಹಾಕಿದರೆ, ಕೆಲವರು ರಾತ್ರಿ 1ರ ನಂತರ ಮಳೆ ಕಡಿಮೆಯಾದ ಬಳಿಕ ತಮ್ಮ ವಾಹನ ತೆಗೆದುಕೊಂಡು ತೆರಳಲು ಅನುವಾಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

ತಡರಾತ್ರಿವರೆಗೂ ಕಾರಲ್ಲೇ: ಇನ್ನು ಕಾರು, ಬಿಆರ್‌ಟಿಎಸ್‌ ಬಸ್‌ಗಳು ಸಹ ಮಳೆ ನೀರಲ್ಲೇ ನಿಂತು ಎಂಜಿನ್‌ಗಳಲ್ಲಿ ನೀರು ಹೋಗಿ ಸ್ಥಗಿತಗೊಂಡಿದ್ದವು. ಕಾರಲ್ಲಿ ಕುಳಿತವರು ಅತ್ತ ಕೆಳಕ್ಕೆ ಇಳಿಯಲು ಆಗುತ್ತಿರಲಿಲ್ಲ. ಇಳಿದರೆ ನದಿಯಲ್ಲೇ ಹೆಜ್ಜೆ ಇಟ್ಟಂತೆ ನೀರಲ್ಲೇ ಕಾಲಿಡಬೇಕು. ಇನ್ನು ಕಾರು ಮುಂದೆ ಸಾಗುತ್ತಿಲ್ಲ. ಹೀಗಾಗಿ ತಡರಾತ್ರಿ ವರೆಗೂ ಕಾರಲ್ಲೇ ಕಳೆಯುವಂತಹ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮಳೆ ನಿಂತು ಒಂದೆರಡು ಗಂಟೆ ಕಳೆದ ಮೇಲೆ ಪರಿಚಯಸ್ಥರ ಕಾರುಗಳನ್ನು ತರಿಸಿ ಅದರ ಮೂಲಕ ನಿಂತ ಕಾರನ್ನು ತೆಗೆದುಕೊಂಡು ಹೋದರೆ, ಮತ್ತೆ ಕೆಲವರು ತಮ್ಮ ಕಾರನ್ನು ರಸ್ತೆ ಬದಿ ತಳ್ಳಿಕೊಂಡು ನಿಲ್ಲಿಸಿ ಮನೆಯತ್ತ ಸಾಗಿದರು.

ಇನ್ನು ವಾಣಿಜ್ಯ ಸಂಕೀರ್ಣಗಳ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನ, ಕಾರುಗಳೆಲ್ಲ ಅಕ್ಷರಶಃ ನೀರಲ್ಲೇ ಮುಳುಗಿದ್ದವು. ಅವುಗಳನ್ನು ರಾತ್ರಿ ಒಯ್ಯಲು ಅಂತೂ ಸಾಧ್ಯವೇ ಇರಲಿಲ್ಲ. ಹೀಗಾಗಿ ಅಲ್ಲೇ ನಿಲ್ಲಿಸಿ ಹೋಗಿದ್ದ ಮಾಲೀಕರಿಗೆ ಬೆಳಗ್ಗೆ ಬಂದು ನೋಡಿ ಹೌಹಾರುವಂತಾಗಿತ್ತು. ಎಲ್ಲ ವಾಹನಗಳು ಅಕ್ಷರಶಃ ಮುಳುಗಿದ್ದವು. ಅವುಗಳನ್ನು ಚಾಲೂ ಮಾಡಲಂತೂ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇತ್ತು. "ಟೋಯಿಂಗ್ " ವಾಹನ ತರಿಸಿಕೊಂಡೇ ನೇರವಾಗಿ ಗ್ಯಾರೇಜ್‌ಗೆ ಕಳುಹಿಸುವಂತಾಗಿತ್ತು. ಟೋಯಿಂಗ್‌ ವಾಹನಗಳಿಗೂ ಇವತ್ತು ಭಾರೀ ಬೇಡಿಕೆ. ನಗರದಲ್ಲೇ ವಾಹನ ಕಳುಹಿಸಬೇಕೆಂದರೆ ಮೊದಲೆಲ್ಲ ₹1000 ಅಥವಾ ₹2000 ಪಡೆಯುತ್ತಿದ್ದ ಟೋಯಿಂಗ್‌ ವಾಹನಗಳು ₹5 ಸಾವಿರಕ್ಕೂ ಅಧಿಕ ದರ ನಿಗದಿಪಡಿಸುತ್ತಿದ್ದವು. ಮಾಲೀಕರು ಅನಿವಾರ್ಯವಾಗಿ ಕೊಟ್ಟು ಗ್ಯಾರೇಜ್‌ಗೆ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.

ಯುವಕರ ಸೇವೆ: ಇಲ್ಲಿನ ಉಣಕಲ್‌ ಕ್ರಾಸ್‌, ಸಾಯಿನಗರ, ಶ್ರೀನಗರ, ಭೈರಿದೇವರಕೊಪ್ಪ, ಹಳೇಹುಬ್ಬಳ್ಳಿ, ನೇಕಾರನಗರ ಸೇರಿದಂತೆ ವಿವಿಧೆಡೆ ನೀರು ನದಿಯಂತೆ ಹರಿಯುತ್ತಿದ್ದಾಗ ಅಲ್ಲಲ್ಲಿ ಯುವಕರ ಪಡೆಯೂ ವಾಹನ ಸವಾರರನ್ನು ರಕ್ಷಿಸುವಂಥ ಕೆಲಸ ಮಾಡುತ್ತಿದ್ದರು. ದ್ವಿಚಕ್ರವಾಹನ, ಕಾರುಗಳು ನೀರಲ್ಲಿ ಬಂದಾಗ ಮುಂದೆ ಸಾಗಲು ಹರಸಾಹಸ ಪಡಬೇಕಾಗುತ್ತಿತ್ತು. ಆ ವೇಳೆಯ ಮಳೆಯನ್ನೂ ಲೆಕ್ಕಿಸದೇ ಹಲವೆಡೆ ಯುವ ಸಮೂಹ ದ್ವಿಚಕ್ರವಾಹನ, ಕಾರುಗಳನ್ನು ತಳ್ಳಿಕೊಂಡು ಸುರಕ್ಷಿತವಾಗಿ ಮುಂದೆ ಸಾಗಿಸುತ್ತಿದ್ದ ದೃಶ್ಯ ಕಂಡು ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌