ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧನ । ಈ ರೀತಿ ದ್ವೇಷದ ರಾಜಕಾರಣ ಮಾಡಿದವರು ಕಳೆದು ಹೋಗಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಅವರನ್ನು ಏನಾದರೂ ಮಾಡಿ ಜೈಲಿನಲ್ಲಿ ಇಡಬೇಕೆಂದು ಕಾಂಗ್ರೆಸ್ ನಾಯಕರು ಯೋಚಿಸುತ್ತಿದ್ದಾರೆ. ಇದಕ್ಕಾಗಿಯೇ ದಿನಕ್ಕೊಂದು ಪ್ರಕರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಕಾಂಗ್ರೆಸ್ ನಲ್ಲಿ ಇದ್ದಾಗ ಒಳ್ಳೆಯವರಾಗಿದ್ದರು. ಆದರೆ ಬಿಜೆಪಿಗೆ ಬಂದಿದ್ದರಿಂದಾಗಿ ಕೆಟ್ಟವರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಬಳಿಕ ಈ ಎಲ್ಲ ಸಮಸ್ಯೆಗಳು ಪ್ರಾರಂಭವಾಗಿವೆ ಎಂದು ದೂರಿದರು.ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ಈ ರೀತಿ ದ್ವೇಷದ ರಾಜಕಾರಣ ಮಾಡಿದವರು ಕಳೆದು ಹೋಗಿದ್ದಾರೆ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಕೊಡುವುದು ಬೇರೆ. ಅದೇ ದುರುದ್ದೇಶಪೂರ್ವಕವಾಗಿ ತೊಂದರೆ ಕೊಡುವುದು ಬೇರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಪಕ್ಷ ನಾಯಕ ಆರ್ .ಅಶೋಕ್ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಮುಂದೆ ಎಲ್ಲರೂ ಬುರ್ಖ ಹಾಕಿದರೆ ಲವ್ ಜಿಹಾದ್ ಪ್ರಶ್ನೆಯೇ ಬರುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಬಹುದು. ಇಂತಹ ಮಾನಸಿಕತೆ ಇರುವ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗಜ್ವಾಯಿ ಹಿಂದೂ ಉದ್ದೇಶವೇ ಇಸ್ಲಾಮೀಕರಣ:
ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಅಂಬೇಡ್ಕರ್ ಅವರ ಥಾಟ್ಸ್ ಆಫ್ ಪಾಕಿಸ್ತಾನ ಪುಸ್ತಕ ಓದಬೇಕು. ಪುಸ್ತಕದ ಪುಟ ಸಂಖ್ಯೆ 123 ರಲ್ಲಿ ಮುಸ್ಲಿಮರನ್ನು ಏಕೆ ಭಾರತದಿಂದ ಶಿಫ್ಟ್ ಮಾಡಬೇಕು. ಪುಟ ಸಂಖ್ಯೆ 125 ರಲ್ಲಿ ಮುಸ್ಲಿಮರು ಭಾರತಕ್ಕೆ ಬೆದರಿಕೆಯಾಗಿ ಉಳಿಯುತ್ತಾರೆ. ಭಾರತದಲ್ಲಿ ಕೋಮುಗಲಭೆ ಸೃಷ್ಟಿಸುತ್ತಲೇ ಇರುತ್ತಾರೆ. ಪುಟ ಸಂಖ್ಯೆ 233 ಹಾಗೂ 234ರಲ್ಲಿ ಮುಸ್ಲಿಮರು ಸಮಾಜ ಹಾಗೂ ವಿಜ್ಞಾನದ ಪ್ರಬಲ ವಿರೋಧಿಗಳು. ಪುಟ ಸಂಖ್ಯೆ 294ರಲ್ಲಿ ಷರಿಯ ಕಾನೂನು ಭಾರತದ ಸಂವಿಧಾನ ಹಾಗೂ ಕಾನೂನಿಗಿಂತ ಮಿಗಿಲು ಎಂದು ಭಾವಿಸುತ್ತಾರೆ. ಪುಟ ಸಂಖ್ಯೆ 297ರಲ್ಲಿ ಭಾರತದಲ್ಲಿ ಅಶಾಂತಿ ನಿರ್ಮಿಸಲು ಕೋಮುಗಲಭೆ ಸೃಷ್ಟಿಸುತ್ತಲೇ ಇರುತ್ತಾರೆ. 303ರಲ್ಲಿ ಭಾರತದಲ್ಲಿ ಹಿಂದೂಗಳ ಸರ್ಕಾರ ವನ್ನು ಮುಸ್ಲಿಮರು ಎಂದಿಗೂ ಒಪ್ಪುವುದಿಲ್ಲ. ಪುಟ ಸಂಖ್ಯೆ 332 ರಲ್ಲಿ ಅಂಬೇಡ್ಕರ್ ಅವರೇ ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ್ದಾರೆ. ಆ ಪುಣ್ಯಾತ್ಮ ಅಂದೆ ದೂರದೃಷ್ಟಿಯಿಂದ ಇದೆಲ್ಲವನ್ನು ಅಧ್ಯಯನ ಮಾಡಿದ್ದರು ಎಂದು ಹೇಳಿದರು.
ತಿರುಪತಿ ಲಡ್ಡು ಜೊತೆ ಭಾವನಾತ್ಮಕ ಸಂಬಂಧ:
ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ್ದಾರೆ ಎಂದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಿರುಪತಿ ಲಡ್ಡು ಪ್ರಸಾದದ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ಈ ಭಾವನಾತ್ಮಕ ಸಂಬಂಧದ ಜೊತೆಗೆ ಯಾರು ಆಟವಾಡಬಾರದು. ನಾವು ಲಡ್ಡುವನ್ನು ಪ್ರಸಾದದ ರೂಪದಲ್ಲಿ ನೋಡುತ್ತೇವೆ. ನಾವೇ ಎಷ್ಟೋ ಬಾರಿ ಪ್ರಸಾದವನ್ನು ಹಂಚಿದ್ದೇವೆ ಎಂದು ಹೇಳಿದರು.